ಚಿತಾಭಸ್ಮ ವಿಸರ್ಜಿಸಲು ತೆರಳಿದ ಸಂದರ್ಭದಲ್ಲಿ ಕಾಲುಜಾರಿದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಂದಿಯೂ ತುಂಗಭದ್ರಾ ನದಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಬಳ್ಳಾರಿ ಹೂವಿನಹಡಗಲಿಯ ಮದಲಗಟ್ಟಿ ಗ್ರಾಮದಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಹುಬ್ಬಳ್ಳಿಯ ಆನಂದ್ ಬದ್ದಿ ಎಂಬವರು ಸಾವನ್ನಪ್ಪಿದ್ದು ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿಧಿ-ವಿಧಾನಗಳನ್ನು ಪೂರೈಸಿದ ನಂತರ ಅವರ ಪುತ್ರ ವಿಷ್ಣು ಎಂಬವರು ತುಂಗಾನದಿಯಲ್ಲಿ ಚಿತಾಭಸ್ಮವನ್ನು ವಿಸರ್ಜಿಸಲು ನೀರಿಗಿಳಿದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದರು. ಕೂಡಲೇ ಅವರನ್ನು ರಕ್ಷಿಸಲು ಹೋದ ಸಂದರ್ಭದಲ್ಲಿ, ಒಬ್ಬೊಬ್ಬರಾಗಿ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಗದಗ-ಬೆಟಗೇರಿ, ಹುಬ್ಬಳ್ಳಿ ನಿವಾಸಿಗಳಾದ ನಾಗಣ್ಣ (45ವರ್ಷ), ರಾಜಣ್ಣ (37), ಯಲ್ಲಪ್ಪ (80), ವಿಷ್ಣು (35), ಅಮೃತಾಬಾಯಿ (40), ಮಾಣಿಕ್ಯ (48), ಟೀಕಾ ಸಾ ಬಾಕಳೆ (40), ಅಂಬಿಕಾಬಾಯಿ (50) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ತುಂಗಭದ್ರೆಯ ಒಡಲು ಸೇರಿರುವ ಶವಕ್ಕಾಗಿ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಂದು ಶವ ಸಿಕ್ಕಿದ್ದು, ಉಳಿದ ಶವಗಳಿಗಾಗಿ ಅಹೋರಾತ್ರಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೂವಿನಹಡಗಲಿ ಡಿವೈಎಸ್ಪಿ ಕೃಷ್ಣಮೂರ್ತಿ ಹೊಸಕೋಟೆ ತಿಳಿಸಿದ್ದಾರೆ.