ಜನಾರ್ದನ ರೆಡ್ಡಿ ಸತ್ಯಹರಿಶ್ಚಂದ್ರ ಅಲ್ಲ: ಕಾಂಗ್ರೆಸ್ ತಿರುಗೇಟು
ಬೆಂಗಳೂರು, ಬುಧವಾರ, 21 ಜುಲೈ 2010( 11:11 IST )
ಅಕ್ರಮ ಗಣಿ ಹಗರಣದ ಕೆಸರೆರಚಾಟ ರಾಜ್ಯರಾಜಕಾರಣದಲ್ಲಿ ಮುಂದುವರಿದಿದ್ದು, ತಮ್ಮನ್ನು ಅಪ್ಪಟ ಅಪರಂಜಿ ಚಿನ್ನ ಎಂದು ಕರೆದುಕೊಂಡಿರುವ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ತೀವ್ರ ಆಕ್ರೋಶವ್ಯಕ್ತಪಡಿಸಿರುವ ಕಾಂಗ್ರೆಸ್, ರೆಡ್ಡಿಗಳೇನು ಸತ್ಯಹರಿಶ್ಚಂದ್ರರಲ್ಲ ಎಂದು ತಿರುಗೇಟು ನೀಡಿದೆ.
ತಮ್ಮ ಮೇಲಿನ ಆರೋಪ ಮರೆಮಾಚಲು ಈ ರೀತಿ ಸುಳ್ಳುಗಳ ಸರಮಾಲೆ ಹೆಣೆಯುತ್ತಿರುವುದಾಗಿ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು. ಕಾಂಗ್ರೆಸ್ ಪಕ್ಷದವರು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆಂದು ಆರೋಪಿಸಿರುತ್ತಿರುವುದುಹೊಸದೇನಲ್ಲ. ಕಾಂಗ್ರೆಸ್ ಪಕ್ಷದ ಘೋರ್ಪಡೆಯಂತಹವರು ರೆಡ್ಡಿ ಹುಟ್ಟುವ ಮೊದಲೇ ಗಣಿಗಾರಿಕೆ ನಡೆಸುತ್ತಿದ್ದರು ಎಂದರು.
ಲೋಕಾಯುಕ್ತರ ವರದಿಯಲ್ಲಿನ ಅಂಶಗಳಲ್ಲಿ ಕೆಲವನ್ನು ಮಾತ್ರ ಬಹಿರಂಗಪಡಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. 2004ರಿಂದ ಗಣಿಗಾರಿಕೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಯಾವುದೇ ಗಣಿಗಾರಿಕೆ ಇಲ್ಲ. ಆಂಧ್ರದಲ್ಲಿ ಗಣಿಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳುವ ರೆಡ್ಡಿ ಆಂಧ್ರದಲ್ಲಿ ಮಾಡುತ್ತಿರುವುದು ಕೇವಲ 65ಎಕರೆಯಷ್ಟು ಗಣಿಗಾರಿಕೆ ಮಾತ್ರ. ಮಾಹಿತಿ ಪ್ರಕಾರ 50ಲಕ್ಷ ಟನ್ ಸಾಗಿಸಿರಬಹುದು. ಹೆಚ್ಚೆಂದರೆ ಒಂದು ಸಾವಿರ ಕೋಟಿ ಆದಾಯ ಬರಬಹುದು. ಆದರೆ 36ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡುವ ಆದಾಯ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಅಕ್ರಮ ಅದಿರು, ಹಫ್ತಾ ವಸೂಲಿಯಿಂದ ಹಣ ಲೂಟಿ ಮಾಡಿರುವ ಗಣಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿದರೆ ಮಾತ್ರ ಎಲ್ಲ ಅಂಶ ಬಯಲಾಗಲಿದೆ. ಸೋಮಶೇಖರ ರೆಡ್ಡಿ ಅವರ ಐಎಲ್‌ಸಿ ಮಿನರಲ್ಸ್, ಖಾರದಪುಡಿ ಮಹೇಶ್, ಸ್ವಸ್ತಿಕ್ ನಾಗರಾಜ್, ಬಿಜೆಪಿಯ ಆನಂದ ಸಿಂಗ್ ಅವರ ಎಸ್‌ಬಿ ಮಿನರಲ್ಸ್, ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿಯ ರೈಸಿಂಗ್ ಕಾಂಟ್ರಾಕ್ಟ್, ನಾಗೇಂದ್ರ ಅವರ ಮೈನಿಂಗ್ ಕಂಪನಿ ಮುಂತಾದವುಗಳ ಮೂಲಕ ಅಕ್ರಮ ಗಣಿಗಾರಿಕೆ ನಡೆಸಿ ರೆಡ್ಡಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.