ಎಚ್‌ಡಿಕೆ ಕುಟುಂಬ ದಿಢೀರ್ ಶ್ರೀಮಂತರಾಗಿದ್ದು ಹೇಗೆ?: ರೆಡ್ಡಿ ಕಿಡಿ
ಬೆಂಗಳೂರು, ಬುಧವಾರ, 21 ಜುಲೈ 2010( 11:25 IST )
ಅಕ್ರಮ ಗಣಿ ವ್ಯವಹಾರದಲ್ಲಿ ತೊಡಗಿರುವ ರೆಡ್ಡಿ ಸಹೋದರರ ಜಾತಕ ಬಯಲು ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಜನಾರ್ದನ ರೆಡ್ಡಿ, ಎಚ್.ಡಿ.ಕೆ ಸಹೋದರರಾದ ಬಾಲಕೃಷ್ಣೇಗೌಡ ಮತ್ತು ಡಾ.ರಮೇಶ್ ಅವರು ತಮ್ಮ ಒಡೆತನದ ಬಿಎಸ್‌ಕೆ ಟ್ರೇಡಿಂಗ್ ಕಂಪನಿ ಗಣಿ ಮಾಲೀಕರಿಂದ ಹಫ್ತಾ ವಸೂಲಿ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸುವ ಮೂಲಕ ಗಣಿ ಸಮರ ಮುಂದುವರಿದಂತಾಗಿದೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಒಂದು ತಿಂಗಳಲ್ಲಿಯೇ ಬಿಎಸ್‌ಕೆ ವ್ಯವಹಾರ ದುಪ್ಪಟ್ಟಾಗಿತ್ತು. ಆರು ತಿಂಗಳಲ್ಲೇ ಸಂಸ್ಥೆಯ ಬ್ಯಾಂಕ್ ಖಾತೆಗೆ 36.7ಕೋಟಿ ರೂಪಾಯಿ ನಗದು ಜಮಾ ಆಗಿತ್ತು. ಇದನ್ನು ಮಾಡಿದ್ದು ಯಾರು, ಏಕೆ ಎನ್ನುವುದಕ್ಕೆ ನನ್ನ ಬಳಿ ಮಾಹಿತಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
150ಕೋಟಿ ರೂಪಾಯಿ ಗಣಿ ಲಂಚ ಆರೋಪದಲ್ಲಿ ಈ 36.7ಕೋಟಿಯೂ ಸೇರಿದೆ. ಉಳಿದ ಹಣಕ್ಕೆ ನಂತರ ವಿವರ ನೀಡುವುದಾಗಿ ಹೇಳಿದ ರೆಡ್ಡಿ, ಆ ಕೋಟ್ಯಂತರ ರೂಪಾಯಿ ಹಣವನ್ನು ನಗದು ರೂಪದಲ್ಲೇ ಡ್ರಾ ಮಾಡಲಾಗಿದೆ. ಟ್ರೇಡಿಂಗ್ ನೆಪದಲ್ಲಿ ಹಫ್ತಾ ವಸೂಲಿ ಮಾಡಿದ ಹಣ ಇದು ಎಂದು ದೂರಿದರು.
ಈ ಹಣಬಲದಿಂದಲೇ ಕುಮಾರಸ್ವಾಮಿ ಕುಟುಂಬ ರಾಜ್ಯ ರಾಜ್ಯಾದ್ಯಂತ ಆಸ್ತಿಗಳನ್ನು ಖರೀದಿಸಿತ್ತು. ಈ ವಿಷಯ ಬಹಿರಂಗಗೊಂಡ ನಂತರ ಖರೀದಿ ಮಾಡಿದ ಆಸ್ತಿಯನ್ನು ಹಿಂದಿರುಗಿಸಿದ್ದರು ಎಂದು ವಿವರಿಸಿದರು. ಇಷ್ಟೊಂದು ಪ್ರಮಾಣದಲ್ಲಿ ಹಣ ಬರಲು ಅವರಿಗೇನು ಗಣಿ ಇದೆಯೇ? ಎಲ್ಲಿಂದ ಬಂತು? ಈ ಕುರಿತು ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತ ತನಿಖೆಗೆ ನೀಡುವುದಾಗಿ ಈ ಸಂದರ್ಭದಲ್ಲಿ ಹೇಳಿದರು.