ಹುಟ್ಟು ಆಕಸ್ಮಿಕ ಸಾವು ಖಚಿತ ಇದರ ಮಧ್ಯೆ ಜಾತ್ಯತೀತ ಮನೋಭಾವನೆಯಿಂದ ಕಾಯ, ವಾಚಾ, ಮನಸ ಜನಸೇವೆ ಮಾಡುವುದೇ ನನ್ನ ಜೀವನದ ಗುರಿ ಎಂದು ಮಾಜಿ ಸಚಿವ ವಿ.ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.
60ನೇ ವಸಂತಕ್ಕೆ ಕಾಲಿಟ್ಟಿರುವ ಸೋಮಣ್ಣ ಅವರು ಅಪಾರ ಅಭಿಮಾನಿಗಳು ಬಂಧು-ಬಳಗದವರಿಂದ ಶುಭ ಹಾರೈಕೆ ಪಡೆದ ನಂತರ ಮಾತನಾಡಿದರು.
ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಯ ಗುರಿ ಹೊಂದಿರುವ ಬಿಜೆಪಿ ಸರಕಾರಕ್ಕೆ ವಿಜಯನಗರ ಮತ್ತು ಗೋವಿಂದರಾಜನಗರ ಜನತೆಯ ಕೊಡುಗೆ ಅಪಾರ, ಈ ಎರಡು ಕ್ಷೇತ್ರಗಳು ನನ್ನ ಎರಡು ಕಣ್ಣುಗಳಿದ್ದಂತೆ. ಅವರ ಋಣ ತೀರಿಸಲು ಹತ್ತು ಜನ್ಮ ಎತ್ತಿದರೂ ಸಾಧ್ಯವಿಲ್ಲ. ಹೀಗಾಗಿ ಅವರ ಸೇವೆಗೆ ನನ್ನ ಜೀವನ ಮುಡಿಪಾಗಿಡುತ್ತೇನೆ ಎಂದರು.
ರಾಜಕೀಯ ವ್ಯಕ್ತಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕದಂತಿರುವ ಮಠ ಮಾನ್ಯಗಳು, ಶ್ರೀಗಳ ಆಶೀರ್ವಾದ ಅತ್ಯಗತ್ಯ ಅವರ ಶ್ರೀರಕ್ಷೆಯಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳಿದರು. ಹುಟ್ಟುಹಬ್ಬದ ಅಂಗವಾಗಿ ಆದಿಚುಂಚನಗಿರಿ ಮಠಕ್ಕೆ ತೆರಳಿದ ಸೋಮಣ್ಣ ಶ್ರೀಬಾಲಗಂಗಾಧರನಾಥ ಸ್ವಾಮಿಗಳ ಆಶೀರ್ವಾದ ಪಡೆದರು. ಸಿದ್ದಗಂಗಾ ಕ್ಷೇತ್ರದ ಕಿರಿಯ ಶ್ರೀಗಳು ಮತ್ತಿತರ ಮಠಾಧಿಪತಿಗಳು ಸೋಮಣ್ಣ ನಿವಾಸಕ್ಕೆ ಆಗಮಿಸಿ ಹಾರೈಸಿದರು.