ತುಂಗಭದ್ರಾ ನದಿಗೆ ತ್ಯಾಜ್ಯ ಬಿಡುವ ಕಾರ್ಖಾನೆಗಳ ವಿರುದ್ಧ 2 ತಿಂಗಳೊಳಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿರುವುದಾಗಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿಯ ಸಭಾಂಗಣದಲ್ಲಿ ಜರುಗಿದ ತುಂಗಭದ್ರಾ ಯೋಜನೆಯ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನದಿಗೆ ತ್ಯಾಜ್ಯ ಬಿಡುವುದರಿಂದ ನೀರು ಕಲುಷಿತಗೊಂಡು ಕುಡಿಯಲು ಯೋಗ್ಯವಾಗಿಲ್ಲ. ಆದರೆ ನೀರನ್ನು ಶುದ್ದೀಕರಿಸಿ ಕುಡಿಯಬಹುದು ಎಂದು ವರದಿ ನೀಡಿದೆ. ಈ ಕುರಿತು ಸಂಬಂಧಿಸಿದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲಾಧಿಕಾರಿ ಸೇರಿದಂತೆ ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಇಲಾಖೆಗೂ ಪತ್ರ ಬರೆದು ತಪ್ಪಿತಸ್ಥ ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳಲು ಸೂಚಿಸಿದೆ. ಈಗಾಗಲೇ ಜಲಾಶಯ ನೀರು ಬಳಕೆಗೆ ಅನುಮತಿ ಪಡೆದಿರುವ ಕಂಪನಿಗಳು ನೀರು ಇದ್ದಾಗಲೇ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದರು.
ಹೊಸದಾಗಿ ಸ್ಥಾಪನೆಯಾಗುವ ಕಾರ್ಖಾನೆಗಳಿಗೆ ಜಲಾಶಯ ನೀರು ಬಳಕೆಗೆ ಅವಕಾಶ ನೀಡದಿರಲು ತೀರ್ಮಾನಿಸಿದೆ. ಜತೆಗೆ ನೀರು ಬಳಕೆಗೆ ಹೊಸದಾಗಿ 5 ಕಾರ್ಖಾನೆಗಳಿಂದ ಪ್ರಸ್ತಾವನೆ ಬಂದಿದೆ. ಆದರೆ ಜಲಾಶಯದ ನೀರು ಬಳಕೆಗೆ ಅವಕಾಶ ನೀಡುವುದಿಲ್ಲ. ನದಿಯಲ್ಲಿ ನೀರು ಬಿಟ್ಟಾಗ ಸಂಗ್ರಹಿಸಿ ಬಳಸಿಕೊಳ್ಳಬಹುದು. ರೈತರಿಗೆ ಅನನುಕೂಲವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.