ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ: ಸಿಂಘಾಲ್
ಹುಬ್ಬಳ್ಳಿ, ಬುಧವಾರ, 21 ಜುಲೈ 2010( 15:09 IST )
ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಅವಕಾಶವಿಲ್ಲ. ಈಗಾಗಲೇ ಅಲ್ಲಿ ಸಾಕಷ್ಟು ಮಸೀದಿಗಳಿವೆ. ಅಯೋಧ್ಯೆಯಲ್ಲಿ ಇತ್ತೀಚಿಗಷ್ಟೆ ನಡೆದ ಕರ ಸೇವಕ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ಶ್ರೀರಾಮ ಜನ್ಮಭೂಮಿ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ. 60ರಷ್ಟು ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ಅದೇ ಕಲ್ಲುಗಳಿಂದಲೇ ಮಂದಿರ ನಿರ್ಮಾಣ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ತಿಳಿಸಿದ್ದಾರೆ.
ಅಲ್ಲದೇ, ದೇಶದ ಎಲ್ಲ ಮಂದಿರ-ಮಠಗಳಲ್ಲಿ 'ಹನುಮಾನ ಶಕ್ತಿ ಜಾಗೃತಿ' ಆಂದೋಲನವನ್ನು ಆಗಸ್ಟ್ 16ರಿಂದ ನಾಲ್ಕು ತಿಂಗಳ ಕಾಲ ನಡೆಸಲಾಗುವುದು ಎಂದು ತಿಳಿಸಿದರು.
ಆಂದೋಲನದ ಅಂಗವಾಗಿ 'ಹನುಮಾನ ಚಾಲಿಸಾ' ಪಠಣ ನಡೆಯಲಿದೆ. ಈ ಕಾರ್ಯಕ್ರಮದ ಮೂಲಕ ರಾಮಜನ್ಮ ಭೂಮಿ ನಿರ್ಮಾಣ ಕಾರ್ಯವನ್ನು ಶೀಘ್ರದಲ್ಲೇ ಕೈಗೊಳ್ಳಲು ಪ್ರತಿಯೊಬ್ಬರು ಪಣತೊಡಲಿದ್ದಾರೆ ಎಂದರು.
ಅವರು ಇತ್ತೀಚೆಗೆ ನಗರಕ್ಕೆ ಆಗಮಿಸಿ, ವಿಎಚ್‌ಪಿ ಕರ್ನಾಟಕ ಉತ್ತರ ಪ್ರಾಂತ ಕೋಶಾಧ್ಯಕ್ಷ ಚಂದ್ರಶೇಖರ ಢವಳಗಿ ಅವರ ವಿಜಯನಗರದ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ಅವರು, ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಲಕ್ಷಾಂತರ ಸಾಧು-ಸಂತರು ಹಾಗೂ ಹಿಂದೂ ಸಂಘಟನೆಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀರಾಮನ ಎಲ್ಲ ಕೆಲಸ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿಗೆ ಹುನುಮಾನ್ ಪಾತ್ರನಾಗಿದ್ದಾನೆ. ಆದ್ದರಿಂದ ಅಯೋಧ್ಯೆಯಲ್ಲಿ ಶ್ರೀ ರಾಮಜನ್ಮ ಭೂಮಿ ನಿರ್ಮಾಣ ಕಾರ್ಯವನ್ನೂ ಅವನೇ ನೆರವೇರಿಸಲಿದ್ದಾನೆ ಎಂದೂ ಸಿಂಘಾಲ್ ತಿಳಿಸಿದರು.