ಅಕ್ರಮ ಗಣಿ ಹಗರಣದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ತಾವು ಕೂಡ ಬಳ್ಳಾರಿಯಿಂದ ಮೈಸೂರು ತನಕ ರೆಡ್ಡಿ ಬ್ರದರ್ಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಸ್ವತಃ ರೆಡ್ಡಿ ಆಪ್ತ ಶಾಸಕರು ಸೇರಿದಂತೆ ಬಿಜೆಪಿ ವಲಯದಲ್ಲಿ ವಿರೋಧ ವ್ಯಕ್ತವಾಗತೊಡಗಿದೆ.
ಪಾದಯಾತ್ರೆ ಮಾಡುವುದಿದ್ದರೆ ಅದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರು ಒಂದೆಡೆ ಸೇರಿ ಚರ್ಚಿಸುತ್ತೇವೆ. ಏಕಾಏಕಿ ಪಾದಯಾತ್ರೆ ನಡೆಸಿದರೆ ಅದಕ್ಕೆ ತಮ್ಮ ಬೆಂಬಲವಿಲ್ಲ ಎಂದು ಸಚಿವ ರೇಣುಕಾಚಾರ್ಯ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ಅಪಸ್ವರ ಎತ್ತಿದ್ದಾರೆ.
ಏತನ್ಮಧ್ಯೆ, ಸಚಿವ ಶ್ರೀರಾಮುಲು ಭಿನ್ನ ಹೇಳಿಕೆ ನೀಡಿದ್ದು, ಪಾದಯಾತ್ರೆ ಕುರಿತಂತೆ ಈಗಾಗಲೇ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಪಾದಯಾತ್ರೆ ನಡೆದೇ ನಡೆಯುತ್ತೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸೆಡ್ಡು ಹೊಡೆಯುವ ಮೂಲಕ ರಾಜ್ಯರಾಜಕಾರಣದಲ್ಲಿ ಮತ್ತೆ ರೆಡ್ಡಿ ಬಣ ಮತ್ತು ಮುಖ್ಯಮಂತ್ರಿ ಬಣಗಳ ನಡುವೆ ಬಿಕ್ಕಟ್ಟು ಮೂಡುವ ಲಕ್ಷಣಗಳ ಗೋಚರವಾಗತೊಡಗಿದೆ.
ನಾವ್ಯಾರು ಈಗ ರೆಡ್ಡಿ ಸಹೋದರರ ರಾಜಕೀಯ ದಾಳವಾಗಲು ಸಿದ್ದವಿಲ್ಲ. ಪಾದಯಾತ್ರೆ ಮಾಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂಬುದು ರೆಡ್ಡಿ ಆಪ್ತರೆಂದೇ ಗುರುತಿಸಿಕೊಂಡಿದ್ದ ರೇಣುಕಾಚಾರ್ಯ, ಬೇಳೂರು, ಬಿ.ಪಿ.ಹರೀಶ್, ರಾಜು ಕಾಗೆ ಅವರ ಸ್ಪಷ್ಟ ನುಡಿಯಾಗಿದೆ.
ಒಟ್ಟಾರೆ ಒಂದೆಡೆ ಕಾಂಗ್ರೆಸ್ ಪಾದಯಾತ್ರೆಗೆ ತಾವೂ ಕೂಡ ಪಾದಯಾತ್ರೆ ಮಾಡುತ್ತೇವೆ ಎಂದು ರೆಡ್ಡಿ ಬ್ರದರ್ಸ್ ಘೋಷಿಸಿದ್ದರೆ. ಮತ್ತೊಂದೆಡೆ ರೆಡ್ಡಿ ಸಹೋದರರ ಯಾತ್ರೆಗೆ ಪಕ್ಷದ ಶಾಸಕ, ಸಚಿವರೇ ತಿರುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಪಾದಯಾತ್ರೆ ಕುರಿತಂತೆ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಯಾವುದೇ ಸ್ಪಷ್ಟ ಅನುಮತಿ ನೀಡಿಲ್ಲ.
ಆ ನಿಟ್ಟಿನಲ್ಲಿ ಪಾದಯಾತ್ರೆ ಮಾಡಿಯೇ ತೀರುವುದಾಗಿ ಶ್ರೀರಾಮುಲು ಪಟ್ಟು ಹಿಡಿದಿದ್ದು, ಮತ್ತೊಂದೆಡೆ ಪಕ್ಷದ ಶಾಸಕರು ವಿರೋಧ ವ್ಯಕ್ತಪಡಿಸಿರುತ್ತಿರುವುದು ಬಿಜೆಪಿಯಲ್ಲಿ ಮತ್ತೊಂದು ಜಂಗೀಕುಸ್ತಿಗೆ ವೇದಿಕೆಗೆ ಸಿದ್ದವಾದಂತಾಗಿದೆ. ಈ ಮೊದಲು ರಾಜ್ಯರಾಜಕಾರಣದಲ್ಲಿ ರೆಡ್ಡಿ ಸಹೋದರರು ನಡೆಸಿದ ಹೈ ಡ್ರಾಮಾದಲ್ಲಿ ರೇಣುಕಾಚಾರ್ಯ, ಬೇಳೂರು ಸೇರಿದಂತೆ ಹಲವಾರು ಶಾಸಕರು ಪ್ರಮುಖ ಪಾತ್ರಧಾರಿಗಳಾಗಿದ್ದರು. ಆದರೆ ಇದೀಗ ರೆಡ್ಡಿ ಬ್ರದರ್ಸ್ ಆಪ್ತರೇ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ.