ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರೆಡ್ಡಿಗಳಂಥ ಸಾಕಷ್ಟು ಜನರನ್ನು ಕಂಡಿರುವೆ: ಎಚ್‌ಡಿಕೆ ತಿರುಗೇಟು (Kumaraswamy | JDS | Janardana Reddy | BJP | Yeddyurappa)
Bookmark and Share Feedback Print
 
'ರೆಡ್ಡಿಗಳಂಥ ಸಾಕಷ್ಟು ಜನರನ್ನು ನೋಡಿದ್ದೇನೆ' ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬ್ಲ್ಯಾಕ್ ಗೋಲ್ಡ್ ಮೈನಿಂಗ್ ಕಂಪನಿ ಅವ್ಯವಹಾರದ ಬಗ್ಗೆ ಸಚಿವ ಜನಾರ್ದನ ರೆಡ್ಡಿ ಮಾಧ್ಯಮಗಳ ಹಾದಿ ತಪ್ಪಿಸಿದ್ದಾರೆ. ಅಕ್ರಮಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಗುರುವಾರ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅದಿರನ್ನು ಮಾತ್ರ ಖರೀದಿಸಿದ್ದೇನೆ. ಯಾವುದೇ ರೀತಿಯಲ್ಲಿ ಗಣಿಗಾರಿಕೆ ಮಾಡಿಲ್ಲ ಎಂಬ ರೆಡ್ಡಿ ವಾದಕ್ಕೆ, ದಾಖಲೆ ಸಹಿತ ವಿವರವನ್ನು ಬಹಿರಂಗಗೊಳಿಸಿದರು.

ಬ್ಲ್ಯಾಕ್ ಗೋಲ್ಡ್ ಮೈನಿಂಗ್ ಕಂಪನಿ ಬಗ್ಗೆ ಜನಾರ್ದನ ರೆಡ್ಡಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಬ್ಲ್ಯಾಕ್ ಗೋಲ್ಡ್ ಮೈನಿಂಗ್ ಕಂಪನಿಯ ಲೀಸ್ ಅವಧಿ 1992ರಲ್ಲಿ ಮುಕ್ತಾಯಗೊಂಡ ನಂತರ, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ಬ್ಲ್ಯಾಕ್ ಗೋಲ್ಡ್ ಕಂಪನಿಯಲ್ಲಿ ಸ್ಟಾಕ್ ಇರುವ ಅದಿರನ್ನು ತೆಗೆಯಲು ಅನುಮತಿ ನೀಡಬೇಕೆಂದು ಕೋರಿ, ಹೊಸದಾಗಿ ಗಣಿಗಾರಿಕೆ ನಡೆಸಿ ಅದಿರನ್ನು ಸಾಗಾಟ ಮಾಡಿರುವುದಾಗಿ ಎಚ್‌ಡಿಕೆ ಆರೋಪಿಸಿದರು.

ನಿಜಕ್ಕೂ ಬ್ಲ್ಯಾಕ್ ಗೋಲ್ಡ್ ಕಂಪನಿ ಬಳಿ ಹಳೇ ದಾಸ್ತಾನು ಇರಲಿಲ್ಲವಾಗಿತ್ತು. ಆದರೆ ರಾಜ್ಯದಲ್ಲಿ ರೆಡ್ಡಿ ಅಕ್ರಮ ಗಣಿಗಾರಿಕೆ ಮಾಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ದಾಖಲೆಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ ಎಂದರು. ಗಣಿಗಾರಿಕೆಯ ಉಪಕರಣಗಳ ಬಾಡಿಗೆಯೇ 98ಲಕ್ಷ ರೂಪಾಯಿ ಆಗಿದೆ ಎಂದು ನಮೂದಿಸಿದ್ದಾರೆ. ಒಂದು ವೇಳೆ ಗಣಿಗಾರಿಕೆ ನಡೆಸಿಲ್ಲವೆಂದಾದರೆ ಉಪಕರಣ ಬಾಡಿಗೆ ಪಡೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

2005ರ ಜುಲೈ ತಿಂಗಳಿನಲ್ಲಿ ಅನಂತಪುರಂ ಕಂಪನಿ ಆರಂಭವಾಗಿತ್ತು. ಆದರೆ ರೆಡ್ಡಿಗಳು ಹೊಸ ಮೈನಿಂಗ್ ಮಾಡಿರುವ ಬಗ್ಗೆ 6-12-2004ರಲ್ಲಿಯೇ ಎಸಿಎಫ್ ವರದಿ ಕೊಟ್ಟಿದ್ದರು. ನಾನು ಮುಖ್ಯಮಂತ್ರಿಯಾಗಿದ್ದು 2006 ಫೆಬ್ರುವರಿ 3ರಂದು. ಹಾಗಿದ್ದ ಮೇಲೆ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಾಗಲಿ, ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡುವುದು ಹೇಗೆ ಸಾಧ್ಯ ಎಂದರು. ನಾನು ಮುಖ್ಯಮಂತ್ರಿಯಾಗುವುದಕ್ಕೆ ಮೊದಲೇ ಈ ಅವ್ಯವಹಾರ ನಡೆಸಿದ್ದಾರೆ. ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆಗೆ ಕುಮ್ಮಕ್ಕು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ನ್ಯಾಯಾಲಯಕ್ಕೆ ಸುಳ್ಳು ದಾಖಲೆ ಕೊಟ್ಟು ಮೆಟಿರಿಯಲ್ ಲಿಫ್ಟ್ ಮಾಡಲು ಆದೇಶ ಪಡೆದುಕೊಂಡಿದ್ದರು. ಆದರೆ ಮಾಧ್ಯಮಗಳ ಮುಂದೆ ರೆಡ್ಡಿ ಸುಳ್ಳು ಹೇಳಿಕೆ ನೀಡಿ, ತಾನು ಯಾವುದೇ ಅಕ್ರಮ ನಡೆಸಿಲ್ಲ, ಅಪ್ಪಟ ಅಪರಂಜಿ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಮೋದಿ ಯಾರೆಂಬುದೇ ನನಗೆ ಗೊತ್ತಿಲ್ಲ: ದಯವಿಟ್ಟು ಮಾಧ್ಯಮ ಮಿತ್ರರಲ್ಲಿ ಕೈಮುಗಿದು ಬೇಡಿಕೊಳ್ಳುತ್ತೇನೆ, ದಾಖಲೆ ಇಲ್ಲದೆ ಮಾಡುವ ಆರೋಪಕ್ಕೆ ಹೆಚ್ಚಿನ ಮಹತ್ವ ನೀಡಬೇಡಿ ಎಂದು ಕುಮಾರಸ್ವಾಮಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. ಜನಾರ್ದನ ರೆಡ್ಡಿ ನನ್ನ ಸಹೋದರರ ಮೇಲೆ ಹಾಗೂ ಬಿಎಸ್‌ಕೆ ಕಂಪನಿ ಮೇಲೆ ಆರೋಪ ಹೊರಿಸಿದ್ದಾರೆ. ಅಲ್ಲದೇ ನಾನು ಗಣಿ ಧಣಿ ಮೋದಿಯಿಂದ 36 ಕೋಟಿ ರೂಪಾಯಿ ನಗದು ಲಂಚ ಪಡೆದಿರುವುದಾಗಿ ಹೇಳಿದ್ದಾರೆ. ಒಂದು ವೇಳೆ ನಾನು ಲಂಚ ಪಡೆದಿರುವುದನ್ನು ಸಾಬೀತುಪಡಿಸಿದರೆ ರಾಜಕೀಯ ಜೀವನದಿಂದ ನಿವೃತ್ತಿಯಾಗುವುದಾಗಿ ಸವಾಲು ಹಾಕಿದರು.

ನನಗೆ ಮೋದಿ ಯಾರೆಂಬುದೇ ಗೊತ್ತಿಲ್ಲ, ನಾನು ಅವರಿಂದ 150 ಕೋಟಿ ಲಂಚ ಪಡೆದಿದ್ದು, ಅದರಲ್ಲಿ 36 ಕೋಟಿ ರೂಪಾಯಿ ನಗದಾಗಿ ಬ್ಯಾಂಕ್‌ನಿಂದ ಪಡೆದಿದ್ದೇನೆ ಎಂದು ರೆಡ್ಡಿ ಆರೋಪಿಸಿದ್ದಾರೆ, ಅದಕ್ಕಾಗಿ ಬ್ಯಾಂಕ್ ಸ್ಟೇಟ್‌ಮೆಂಟ್ ದಾಖಲೆ ಕೊಟ್ಟಿದ್ದೇನೆ. ನಾನು 36 ಕೋಟಿ ರೂಪಾಯಿ ಪಡೆದಿರುವ ಬಗ್ಗೆ ದಾಖಲೆ ಇದ್ದಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಹೇಳಿದರು.

ಅಷ್ಟೇ ಅಲ್ಲ, ಅಕ್ರಮ ಗಣಿಗಾರಿಕೆ ಕುರಿತಂತೆ ತಾನು ಸಿಬಿಐ ತನಿಖೆಗೆ ಸಿದ್ದ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳಿಗೆ ಸಿಬಿಐ ತನಿಖೆಗೆ ಒಪ್ಪಿಸಲು ಯಾಕೆ ಭಯ ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು. ಅದೇ ರೀತಿ ನಾನು ಕೂಡ ಯಾವುದೇ ತನಿಖೆಗೂ ಸಿದ್ದ ಎಂದರು.
ಸಂಬಂಧಿತ ಮಾಹಿತಿ ಹುಡುಕಿ