ವಂಚನೆಗೊಳಗಾದ ಜನರಿಗೆ ಹಣ ಮರುಪಾವತಿಗಾಗಿ ವಿನಿವಿಂಕ್ ಶಾಸ್ತ್ರಿಯ ಹೊಸಕೋಟೆ ಹಾಗೂ ಯಲಹಂಕ ಸಮೀಪದ ಆಸ್ತಿಯನ್ನು ಗುರುವಾರ ಹರಾಜು ಮಾಡಲಾಗಿದ್ದು, ಮಾರುಕಟ್ಟೆ ಬೆಲೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾಗಿದೆ.
ಹೊಸಕೋಟೆ ತಾಲೂಕಿನ ಏಕರಾಜಪುರ ಸಮೀಪದ 26ಎಕರೆ ಭೂಮಿಯನ್ನು ಬೆಂಗಳೂರಿನ ಜಿಂದಾಲ್ ಸ್ಟೀಲ್ ಕಂಪನಿ 4.15ಕೋಟಿ ರೂ.ಗೆ ಹರಾಜು ಆಗಿದೆ. ಅದೇ ರೀತಿ ಯಲಹಂಕ ಸಮೀಪದ ಕೋಗಿಲು ಗೇಟ್ ಬಳಿ ಇರುವ 36ನಿವೇಶನಗಳನ್ನು ಅದೇ ಜಾಗದಲ್ಲಿ ಹರಾಜು ನಡೆಸಲಾಗಿದ್ದು, ಪ್ರತಿ ನಿವೇಶನವೂ ಸರಾಸರಿ 18ಲಕ್ಷ ರೂ.ಗೆ ಹರಾಜಾಗಿದೆ.
ಎರಡು ಪ್ರತ್ಯೇಕ ಜಾಗದಲ್ಲಿ ನಡೆದ ಹರಾಜು ಕುರಿತು ಸ್ಥಳೀಯ ಅಧಿಕಾರಿಗಳು ಸರಕಾರಕ್ಕೆ ವರದಿ ನೀಡಲಿದ್ದು, ಈ ಬೆಲೆಯನ್ನು ಒಪ್ಪಿಕೊಳ್ಳುವುದು ಅಥವಾ ಬಿಡುವ ಬಗ್ಗೆ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಯಲಹಂಕ ಬಳಿಯ ಕೋಗಿಲು ಗೇಟ್ ಬಳಿಯ ಒಂದನೇ ನಿವೇಶನವನ್ನು ಬಿಂದು ಎಂಬುವರು 21.60ಲಕ್ಷ ರೂ.ಗೆ ಖರೀದಿಸಿದರು. 2ನೇ ನಿವೇಶನವನ್ನು ವಿನಿವಿಂಕ್ ಸಂಸ್ಥೆಯಲ್ಲಿ ಹಣ ಇಟ್ಟು ವಂಚನೆಗೊಳಗಾಗಿದ್ದ ವೀಣಾರಾವ್ ಅವರು 18.25 ಲಕ್ಷ ರೂಪಾಯಿಗೆ ಖರೀದಿಸಿದರು. 3ನೇ ನಿವೇಶನವನ್ನು 18 ಲಕ್ಷ ಮತ್ತು 4ನೇ ನಿವೇಶನ 18.70 ಲಕ್ಷ ರೂಪಾಯಿಗಳಿಗೆ ಹರಾಜಾಗಿದೆ. ಒಟ್ಟು 36 ನಿವೇಶನಗಳನ್ನು ರಾಜ್ಯ ಸರಕಾರ 59 ಕೋಟಿ ರೂಪಾಯಿಗಳಿಗೆ ಬಿಡ್ ಮಾಡಿತ್ತು. ಈ ನಿವೇಶನದಲ್ಲಿ ತಮ್ಮ ಪಾಲುದಾರಿಕೆ ಇರುವುದರಿಂದ ಹರಾಜು ಪ್ರಕ್ರಿಯೆಗೆ ತಡೆ ನೀಡಬೇಕೆಂದು ಸತೀಶ್ ಪೈ ಮತ್ತು ಕೃಷ್ಣಮೂರ್ತಿ ಎಂಬವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆದರೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂ ಹರಾಜಿಗೆ ಗ್ರೀನ್ ಸಿಗ್ನಲ್ ನೀಡಿತ್ತು.
ಇಂದು ಬಾಡಿಗೆ ನಿಯಂತ್ರಣಾಧಿಕಾರಿ ಎನ್.ಚಂದ್ರಶೇಖರ್, ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್ ವೆಂಕಟೇಶ್, ಬಿಬಿಎಂಪಿಯ ರಂಗಯ್ಯ ಮತ್ತಿತರ ಅಧಿಕಾರಿಗಳಿಗೆ ಸಮ್ಮುಖದಲ್ಲಿ ನಡೆದ 36ನಿವೇಶನಗಳ ಹರಾಜಿನಲ್ಲಿ 34 ನಿವೇಶನಗಳು ಹರಾಜಿನಲ್ಲಿ ಮಾರಾಟವಾಗಿವೆ. ಉಳಿದ ಎರಡು ನಿವೇಶನಗಳಿಗೆ ಯಾರೂ ಬಿಡ್ ಸಲ್ಲಿಸದ ಕಾರಣ ಹರಾಜಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.