ಅಕ್ರಮ ಗಣಿಗಾರಿಕೆ ಕುರಿತಂತೆ ಮಾತಾಡದೆ, ಬಾಯ್ಮುಚ್ಚಿಕೊಂಡಿರಿ ಎಂದು ಬಿಜೆಪಿ ಮುಖಂಡರು ಬೆದರಿಕೆ ಹಾಕಿದ್ದು, ಒಂದು ವೇಳೆ ನನಗಾಗಲಿ, ಕೆ.ಸಿ.ಕೊಂಡಯ್ಯ ಹಾಗೂ ಕುಟುಂಬದ ಸದಸ್ಯರುಗಳಿಗೆ ಏನಾದರು ತೊಂದರೆಯಾದರೆ ಅದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನೇರ ಹೊಣೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಪಾದಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯಮಂತ್ರಿ ಮತ್ತವರ ಕುಟುಂಬದವರು ಭಾಗಿಯಾಗಿದ್ದಾರೆ ಎಂಬ ನನ್ನ ಹೇಳಿಕೆ ಹೊರ ಬೀಳುತ್ತಿದ್ದಂತೆಯೇ ಮುಖ್ಯಮಂತ್ರಿ ಅವರ ಪಟಾಲಂ ಅವರ ಆರ್ಭಟ ಗಮನಿಸಿದರೆ ಈ ರಾಜ್ಯದಲ್ಲಿ ಜಂಗಲ್ ರಾಜ್ ವ್ಯವಸ್ಥೆ ಇದೆ ಎಂಬ ಸಂಶಯ ಕಾಡುತ್ತಿದೆ ಎಂದು ಪತ್ರಿಗೋಷ್ಠಿಯಲ್ಲಿ ಮಾತನಾಡುತ್ತ ದೂರಿದರು.
ಅಕ್ರಮ ಗಣಿಗಾರಿಕೆ ಕುರಿತಂತೆ ಬಿಜೆಪಿ ಮುಖಂಡರು, ಸಚಿವರು ಆಡಿರುವ ಮಾತುಗಳಿಗೆ ಕ್ಷಮೆಯಾಚಿಸಬೇಕು. ಅಕ್ರಮ ಗಣಿಗಾರಿಕೆಯ ಸತ್ಯಾಸತ್ಯತೆ ತಿಳಿಯುವ ಬದಲು ಧಮಕಿ ಹಾಕುವ ಸಂಸ್ಕೃತಿ ಸರಿಯಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನೇ ಮಾಡಿಲ್ಲ ಎಂದು ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆ.ಸಿ.ಕೊಂಡಯ್ಯ ಸಚಿವರು ಆಂಧ್ರಪ್ರದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಎಷ್ಟೆಷ್ಟು ಗಣಿಗಾರಿಕೆ ಮಾಡಿದ್ದಾರೆಂಬುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇನೆ ಎಂದರು.