ಕಾಂಗ್ರೆಸ್‌ನ ಉದ್ದೇಶಿತ ಪಾದಯಾತ್ರೆಯನ್ನು ಶವಯಾತ್ರೆ ಎಂದಿರುವ ಬಿಜೆಪಿ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಕೇಂದ್ರ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಸಿದ್ದಾರ್ಥ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರಕಾರ ತಪ್ಪು ಹೆಜ್ಜೆ ಇಟ್ಟ ಸಂದರ್ಭ ಅದನ್ನು ಎಚ್ಚರಿಸುವ ಕೆಲಸ ಪ್ರತಿಪಕ್ಷಗಳದ್ದು. ಈಗ ಗಣಿ ಹಗರಣದಲ್ಲಿ ಆಗುತ್ತಿರುವ ರಾಜ್ಯದ ಸಂಪತ್ತಿನ ಲೂಟಿ ತಡೆಯುವಂತೆ ಒತ್ತಾಯಿಸಿ ಹಾಗೂ ಜನಹಿತಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈಶ್ವರಪ್ಪಗೆ ಪ್ರಜಾಪ್ರಭುತ್ವ ಮೌಲ್ಯ ತಿಳಿದಂತಿಲ್ಲ. ಸಾರ್ವಜನಿಕರ ಸಂಪತ್ತಿನ ಲೂಟಿ ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿ ಜನಾದೇಶದ ಬದಲು ಹಣ ಬಲ, ತೋಳ್ಬಲದಿಂದ ಅಧಿಕಾರಕ್ಕೆ ಬಂದಿದೆ. ಸರಕಾರ ಇಡುತ್ತಿರುವ ತಪ್ಪು ಹೆಜ್ಜೆಗಳನ್ನು ಸರಿಪಡಿಸಿಕೊಳ್ಳುವಂತೆ ವಿವಿಧ ಹಂತಗಳಲ್ಲಿ ಕಾಂಗ್ರೆಸ್ ನೀಡಿದ್ದ ಎಚ್ಚರಿಕೆ ಪ್ರಯೋಜನಕ್ಕೆ ಬಾರದ ಹಿನ್ನೆಲೆಯಲ್ಲಿ ಆಯೋಜಿಸಿರುವ ಪಾದಯಾತ್ರೆಯನ್ನು ಶವಯಾತ್ರೆ ಎಂದು ಕರೆಯುವ ಮೂಲಕ ಪ್ರಜಾಪ್ರಭುತ್ವಕ್ಕೆ ಈಶ್ವರಪ್ಪ ಚೂರಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಥಯಾತ್ರೆ ಸೇರಿದಂತೆ ಅನೇಕ ಯಾತ್ರೆಗಳನ್ನು ಆಯೋಜಿಸಿತ್ತು. ಹಾಗಾದರೆ ಅವೆಲ್ಲವೂ ಶವಯಾತ್ರೆಗಳೇ ಎಂದು ಪ್ರಶ್ನಿಸಿದ ಅವರು, ಈಶ್ವರಪ್ಪ ತಮ್ಮ ಹೇಳಿಕೆ ಹಿಂಪಡೆಯಲಿ ಎಂದು ಆಗ್ರಹಿಸಿದರು.
ಅಕ್ರಮ ಗಣಿಗಾರಿಕೆಗೆ ಸಂಬಂಸಿದಂತೆ ಅನೇಕರು ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಆ ರೀತಿಯಲ್ಲೆ ಕಾಂಗ್ರೆಸ್ ಮುಖಂಡ ಉಗ್ರಪ್ಪ ಕೂಡ ಆರೋಪಿಸಿದ್ದು, ಅದನ್ನು ಸಚಿವರು, ಶಾಸಕರು ಟೀಕಿಸಿರುವ ಪರಿ ಸರಿಯಲ್ಲ ಎಂದರು.