ಕಡಿಮೆ ಅವಧಿಯಲ್ಲಿ ಸಂತ್ರಸ್ತರಿಗೆ ಆಸರೆ ಮನೆ ನಿರ್ಮಾಣ: ಕಟ್ಟಾ
ವಿಜಾಪುರ, ಶನಿವಾರ, 24 ಜುಲೈ 2010( 15:05 IST )
ತಮಿಳುನಾಡಿನಲ್ಲಿ ಸುನಾಮಿ ಹಾಗೂ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿದಾಗ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ನಾಲ್ಕೈದು ವರ್ಷ ಬೇಕಾಯಿತು. ಆದರೆ ರಾಜ್ಯದಲ್ಲಿ ಕಡಿಮೆ ಅವಧಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದು ನೆರೆ ಸಂತ್ರಸ್ತರ ಆಸರೆ ಯೋಜನೆ ಉಸ್ತುವಾರಿ ವಹಿಸಿಕೊಂಡಿರುವ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸರಕಾರದ ಕಾರ್ಯವನ್ನು ಸಮರ್ಥಿಸಿಕೊಂಡರು.
ಜಿಲ್ಲೆಯ ರೋಣಿಹಾಳ, ಚಿಕ್ಕಗರಸಂಗಿ ಸೇರಿದಂತೆ ಕೆಲ ಗ್ರಾಮಗಳ ಆಸರೆ ಯೋಜನೆ ಪ್ರಗತಿ ಪರಿಶೀಲನೆ ಹಾಗೂ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಆಸರೆ ಯೋಜನೆ ಪ್ರಗತಿ ಬಗ್ಗೆ ಸಮಾಧಾನವಿದ್ದು, ತಾವು ಭೇಟಿ ನೀಡಿದ ಗ್ರಾಮಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆದಿದೆ. ನೆರೆ ಪೀಡಿತ ಜಿಲ್ಲೆಗಳಲ್ಲಿ 5,500 ಎಕರೆ ಜಾಗದಲ್ಲಿ 60 ಸಾವಿರ ನಿವೇಶನ ವಿನ್ಯಾಸಗೊಳಿಸಿದ್ದು, 28,000 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಉಳಿದವುಗಳ ನಿರ್ಮಾಣ ಪ್ರಗತಿ ಬಗ್ಗೆ ಪ್ರತಿ ವಾರ ವಿವರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ವಿಜಾಪುರ ತಾಲೂಕಿನ ಉಕುಮನಾಳದಲ್ಲಿ ಆಸರೆ ಮನೆಗಳ ನಿರ್ಮಾಣ ಕಾಮಗಾರಿ ನೂರಕ್ಕೆ ನೂರರಷ್ಟು ಗುಣಮಟ್ಟದಿಂದ ಕೂಡಿದೆ. ಸಂತ್ರಸ್ತರು ಆತಂಕ ಪಡಬೇಕಿಲ್ಲ ಎಂದು ಈ ಸಂದರ್ಭದಲ್ಲಿ ಸಚಿವರು ಸ್ಪಷ್ಟಪಡಿಸಿದರು.