ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸಂಶೋಧನಾ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು: ಜನಾರ್ದನ ಸ್ವಾಮಿ (Janardana swamy | Congress | Ameica | Chaina | Pakistan)
ಸಂಶೋಧನಾ ಕ್ಷೇತ್ರದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು: ಜನಾರ್ದನ ಸ್ವಾಮಿ
ಚಿತ್ರದುರ್ಗ, ಶನಿವಾರ, 24 ಜುಲೈ 2010( 15:11 IST )
ದೇಶದಲ್ಲಿ ಸಂಶೋಧನೆಯನ್ನು ವೃತ್ತಿಯಾಗಿ ಮಾರ್ಪಡಿಸಲು ಕೇಂದ್ರ, ರಾಜ್ಯ ಸರಕಾರಗಳು ಹೆಚ್ಚಿನ ಆಸಕ್ತಿ ವಹಿಸಿ ಧನಾತ್ಮಕ ಚಿಂತನೆ ನಡೆಸಬೇಕು ಎಂದು ಸಂಸದ ಜನಾರ್ದನಸ್ವಾಮಿ ತಿಳಿಸಿದರು.
ಭಾರತೀಯ ಸಂಸದರ ನಿಯೋಗದಲ್ಲಿ ಒಬ್ಬರಾಗಿ ಅಮೆರಿಕ ಅಧ್ಯಯನ ಪ್ರವಾಸ ಕೈಗೊಂಡಿದ್ದ ಅವರು, ಅಲ್ಲಿ ಚರ್ಚಿಸಿದ ಅಂಶ ಹಾಗೂ ಅನುಭವವನ್ನು ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಹಂಚಿಕೊಂಡರು.
ಭಾರತದೊಂದಿಗೆ ಅಮೆರಿಕ, ಚೀನಾ, ಪಾಕಿಸ್ತಾನ, ಅಪಘಾನಿಸ್ತಾನಗಳ ಮಧ್ಯೆ ಇರುವ ಅಭಿವೃದ್ಧಿ-ಸಮಸ್ಯೆಗಳ ಕುರಿತು ಮಾತುಕತೆ ನಡೆಸಲು ಕಾಂಗ್ರೆಸ್ ಹಿರಿಯ ಮುಖಂಡ ಅಭಿಷೇಕ್ ಸಿಂಘ್ವಿ ನೇತೃತ್ವದಲ್ಲಿ ಜುಲೈ 9ರಂದು ಭಾರತದಿಂದ 'ಸಂಸದರ ನಿಯೋಗ' ಅಮೆರಿಕಕ್ಕೆ ತೆರಳಿತ್ತು. ಹನ್ನೆರಡು ಮಂದಿಯ ನಿಯೋಗದಲ್ಲಿ ಇಬ್ಬರು ಕೇಂದ್ರ ಮಂತ್ರಿಗಳು, 9 ಸಂಸದರು ಹಾಗೂ ಮಹಾರಾಷ್ಟ್ರ ಸಂಸದೆ ಜ್ಯೋತಿ ಗುರ್ವೆ ಇದ್ದರು.
ನ್ಯೂಯಾರ್ಕ್‌ನಲ್ಲಿ ನಡೆದ 'ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಯಲ್(ಎಫ್ಐಸಿಸಿಐ) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು. ಸಂಶೋಧನೆ, ಜಾಗತಿಕ ತಾಪಮಾನ, ಭಯೋತ್ಪಾದನೆ, ತಂತ್ರಜ್ಞಾನ, ಕೃಷಿ ಹೀಗೆ ಆರ್ಥಿಕ-ಸಾಮಾಜಿಕ ಪರಿವರ್ತನೆ ಕುರಿತು ಚರ್ಚಿಸಲಾಯಿತು ಎಂದು ವಿವರಿಸಿದರು.
ಭಾರತ ಉನ್ನತ ಶಿಕ್ಷಣ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ. ದೇಶದಲ್ಲಿ ಸಂಶೋಧನೆ ಎನ್ನುವುದು ಇನ್ನೂ ವೃತ್ತಿಯಾಗಿಲ್ಲ. ಸಂಶೋಧನೆಗಳಿಗೆ ಆರ್ಥಿಕ ಸಹಾಯ, ಪೂರಕ ವಾತಾವರಣ, ಅವಕಾಶ ಇಲ್ಲವೆನ್ನುವ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಕೇಂದ್ರ, ರಾಜ್ಯ ಸರಕಾರಗಳು ಗಂಭೀರ ಚಿಂತನೆ ನಡೆಸಬೇಕು. ಸಂಶೋಧನೆಗೆ ಒತ್ತು ನೀಡದ ಕಾರಣ ಬೇರೆ ದೇಶಗಳನ್ನು ಅವಲಂಬಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇತರ ರಾಷ್ಟ್ರಗಳು ಕಂಡುಹಿಡಿದು ತಯಾರಿಸಿದ ವಸ್ತು, ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಕೇಂದ್ರ-ರಾಜ್ಯ ಸರಕಾರಗಳು ಧನಾತ್ಮಕವಾಗಿ ಚಿಂತನೆ ನಡೆಸಬೇಕು ಎಂದರು.