ರಾಜ್ಯದ ಹೆದ್ದಾರಿಗಳ ಸುಧಾರಣೆಗೆ 2,540 ಕೋಟಿ ರೂ. ನೆರವು ಕೋರಿ ಸಲ್ಲಿಸಿರುವ ಮೂರನೇ ಹಂತದ ಪ್ರಸ್ತಾವನೆಗೆ ವಿಶ್ವ ಬ್ಯಾಂಕ್ ಅನುಮೋದನೆ ನೀಡಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಜಾಗೀರವೆಂಕಟಾಪುರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿ, ಎರಡನೇ ಹಂತದ 650 ಕೋಟಿ ರೂ. ಅಂದಾಜಿನ 500 ಕಿ.ಮೀ. ಹೆದ್ದಾರಿ ನಿರ್ಮಾಣ ಪೂರ್ವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದರು.
ಮತ್ತೊಂದು 900 ಕೋಟಿ ರೂ. ಅಂದಾಜು ವೆಚ್ಚದ ಸುಧಾರಣೆ ವರದಿ ಸಿದ್ಧವಾಗುತ್ತಿದ್ದು, ನಿರ್ಮಾಣ ಹಾಗೂ ಸುಧಾರಣೆಗೊಳ್ಳಲಿರುವ ಹೆದ್ದಾರಿ ಉದ್ದ ಇನ್ನೂ ಅಂತಿಮವಾಗಿಲ್ಲ. ಲೋಕೋಪಯೋಗಿ ಇಲಾಖೆ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳಿಗೆ ಹಣದ ಕೊರತೆ ಉಂಟಾಗಿಲ್ಲ. ಬಾಕಿಯಿರುವ 1,000 ಕೋಟಿ ರೂ. ಬಿಲ್ ಪಾವತಿ ವಿಳಂಬಕ್ಕೆ ಆಡಳಿತಾತ್ಮಕ ಕಾರಣಗಳಿರಬಹುದು ಎಂದು ತಿಳಿಸಿದರು.
ನೆರೆ-ಹೊರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕೇಂದ್ರ ಭೂ ಸಾರಿಗೆ ಸಚಿವರನ್ನು ಎರಡು ಸಲ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಟ್ಟಿರುವೆ. ಶ್ರೀರಂಗಪಟ್ಟಣ-ಬೀದರ್, ಕುಮಟಾ-ಅನಂತಪುರ ಮತ್ತು ತಡಸ-ಶಿವಮೊಗ್ಗ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಲು ಕೋರಲಾಗಿದೆ. ಅವಶ್ಯಕತೆ ವಿವರಿಸಿ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದಿದ್ದಾರೆ.