ಸವಣೂರಿನಲ್ಲಿ ಭಂಗಿ ಜನಾಂಗದವರು ಮಲ ಸುರಿದುಕೊಂಡು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕಿ ಮೋಟಮ್ಮ ಸರಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡ್ಮೂರು ತಿಂಗಳಲ್ಲಿ ಸರಕಾರ ಸದನ ಸಮಿತಿ ರಚಿಸಬೇಕು ಹಾಗೂ ಸವಣೂರು ಪುರಸಭೆಯನ್ನು ವಜಾಗೊಳಿಸಿ ಭಂಗಿ ಜನಾಂಗದವರಿಗೆ ಜಾಗ ತೆರವುಗೊಳಿಸುವಂತೆ ಪುರಸಭೆ ನೀಡಿರುವ ನೋಟಿಸ್‌ನ್ನು ಹಿಂಪಡೆಯಬೇಕು ಎಂದು ಒತ್ತಾಯ ಮಾಡಿದರು. ಕಿರುಕುಳ ಸಹಿಸದೆ ಭಂಗಿ ಜನಾಂಗದವರು ಈ ರೀತಿಯ ಪ್ರತಿಭಟನೆ ನಡೆಸಬೇಕಾಯಿತು. ಆ ಭಾಗದ ಜನಪ್ರತಿನಿಗಳಿಗೆ, ಪುರಸಭೆ ಹಾಗೂ ಜಿಲ್ಲಾಡಳಿತಕ್ಕೆ ಈ ಪ್ರತಿಭಟನೆ ಕುರಿತು ಗೊತ್ತಿದ್ದರೂ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.
ಈ ಕ್ಷೇತ್ರ ಪ್ರತಿನಿಧಿಸುವ ಶಾಸಕ ಹಾಗೂ ಸಚಿವರಿಗೆ ಕಿಂಚಿತ್ತಾದರೂ ಆತ್ಮಗೌರವ ಇದ್ದರೆ ತಕ್ಷಣ ರಾಜೀನಾಮೆ ನೀಡಬೇಕು. ಅಲ್ಲದೇ ಸರಕಾರ ದಲಿತ ಸಮಾಜದ ಕ್ಷಮೆಯಾಚಿಸಬೇಕು. ಪುರಸಭೆಯ ಮುಖ್ಯ ಆಡಳಿತಾಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.