ತುಂಬಾ ದಿನಗಳಿಂದ ಜೈಲು ನೋಡಬೇಕಂತ ಇತ್ತು, ಅದಕ್ಕಾಗಿಯೇ ಜೈಲಿಗೆ ಹೋಗಿದ್ದು, ಇದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಜೈಲಿನಲ್ಲಿರುವ ಹಲವು ಕೈದಿಗಳು ಆಹಾರ ಸಮಸ್ಯೆಯಿಂದಾಗಿ ಅನಾರೋಗ್ಯ ಉಂಟಾಗಿದೆ ಎಂದು ಪತ್ರ ಬರೆದಿದ್ದರು, ಆ ಕಾರಣಕ್ಕಾಗಿ ಕೈದಿಗಳ ಸ್ಥಿತಿಗತಿ ನೋಡಲು ಜೈಲಿಗೆ ತೆರಳಿದ್ದೇನೆ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಜೈಲಿಗೆ ಹೋಗಿ ಕೆಲವು ಗೂಂಡಾಗಳನ್ನು ಭೇಟಿ ಮಾಡಿ ಬಂದಿದ್ದು, ಇದರ ಹಿಂದೆ ದುರುದ್ದೇಶವಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ನೊಂದವರನ್ನು ಭೇಟಿ ಮಾಡಲು ಮಾತ್ರ ಜೈಲಿಗೆ ಹೋಗಿದ್ದೆ, ಅಲ್ಲದೆ, ಜೈಲನ್ನು ನೋಡುವ ಆಸೆಯನ್ನು ಈಡೇರಿಸಿಕೊಂಡೆ ಎಂದು ಹೇಳಿದರು.
ಸದನದಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವುದಾಗಿ ರೋಷಾವೇಶವಾಗಿ ಮಾತನಾಡಿದ್ದರಿಂದ ಆಕ್ರೋಶಗೊಂಡು ಬಳ್ಳಾರಿಯಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದೆ. ಆದರೆ, ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷ ಈಶ್ವರಪ್ಪ ಇನ್ನಿತರರ ಸಚಿವರ ಸಲಹೆಯಿಂದ ಪಾದಯಾತ್ರೆ ಕೈಬಿಟ್ಟು ಸಮಾವೇಶ ನಡೆಸಲು ಮುಂದಾಗಿರುವುದಾಗಿ ತಿಳಿಸಿದರು.
ಅಕ್ರಮ ಗಣಿಗಾರಿಕೆಯಲ್ಲಿ ನಾವ್ಯಾರೂ ತೊಡಗಿಲ್ಲ, ಅಕ್ರಮ ಗಣಿಗಾರಿಕೆ ತೊಡಗಿದ್ದಾರೆಂದು ಕಾಂಗ್ರೆಸ್ಸಿಗರು ದಿನಂಪ್ರತಿ ಆರೋಪಿಸುವ ಮೂಲಕ ನಮ್ಮನ್ನು ಜೀವಂತವಾಗಿ ಕೊಂದಿದ್ದಾರೆ ಎಂದು ಶ್ರೀರಾಮುಲು ಅಸಮಾಧಾನವ್ಯಕ್ತಪಡಿಸಿದರು.