ವಿದ್ಯುತ್ ಅಭಾವಕ್ಕೆ ಪರಿಹಾರ: 4 ವರ್ಷಗಳ ನಿರಂತರ ವಿದ್ಯುತ್ ಖರೀದಿ
ಬೆಂಗಳೂರು, ಭಾನುವಾರ, 25 ಜುಲೈ 2010( 09:29 IST )
ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಮುಂದಿನ ಸೆಪ್ಟೆಂಬರ್‌ನಿಂದ ನಾಲ್ಕು ವರ್ಷಗಳ ಕಾಲ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತಿಯಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವಿದ್ಯುತ್ ಖರೀದಿ ಮಾಡುವ ನಿರ್ಧಾರಕ್ಕೆ ಬರಲಾಗಿದ್ದು, ಈ ಸಂಬಧ ಟೆಂಡರ್ ಕೂಡಾ ಕರೆಯಲಾಗಿದೆ.
ಮಳೆಗಾಲ ಸೇರಿದಂತೆ ವರ್ಷ ಪೂರ್ತಿ ವಿದ್ಯುತ್ ಖರೀದಿ ಮಾಡುವ ಮೂಲಕ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ತೀರ್ಮಾನಿಸಲಾಗಿದೆ. ನಾಲ್ಕು ವರ್ಷಗಳ ಅವಧಿಗೆ ಒಮ್ಮೆಲೇ ಒಪ್ಪಂದ ಮಾಡಿಕೊಳ್ಳುವುದರಿಂದ ಕಡಿಮೆ ದರಕ್ಕೆ ವಿದ್ಯುತ್ ದೊರೆಯಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಸದ್ಯ 552 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದ್ದು ಇದನ್ನು 1,200 ಮೆಗಾವ್ಯಾಟ್‌ಗೆ ಏರಿಸಲು ಉದ್ದೇಶಿಸಲಾಗಿದೆ. ಈ ವರ್ಷ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಮಳೆಗಾಲದಲ್ಲ ವಿದ್ಯುತ್ ಖರೀದಿ ಮಾಡುವುದು ಅನಿವಾರ್ಯವಾಗಿದೆ. 8-10 ದಿನಗಳಿಂದ ಗುಜರಾತ್, ಛತ್ತೀಸ್‌ಗಡ್ ಸೇರಿದಂತೆ ಹಲವೆಡೆಯಿಂದ ವಿದ್ಯುತ್ ಖರೀದಿ ಮಾಡಲಾಗುತ್ತಿದೆ
ಆದರೂ ಲೋಡ್ ಶೆಡ್ಡಿಂಗ್ ಸಮಸ್ಯೆ ತಪ್ಪಿಲ್ಲ. ಕೆಲವೆಡೆ ಈಗಲೂ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮಳೆಯಾಗಿದ್ದರೂ ಲಿಂಗನಮಕ್ಕಿ, ಹಾರಂಗಿ, ಸೂಪಾ ಜಲಾಶಯದ ನೀರಿನ ಮಟ್ಟದಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ.