ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ನಾಡರಕ್ಷಣೆ ನಡಿಗೆಗೆ ಚಾಲನೆ
ಭಾನುವಾರ, 25 ಜುಲೈ 2010( 14:40 IST )
ಗಣಿ ರೆಡ್ಡಿಗಳ ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ಅಸ್ತ್ರವಾದ ಬಳ್ಳಾರಿವರೆಗಿನ ಪಾದಯಾತ್ರೆ ಆರಂಭವಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಾಡರಕ್ಷಣೆ ನಡಿಗೆ ಎಂಬ ಹೆಸರಿನ ಈ ಯಾತ್ರೆಗೆ ಮಾಜಿ ಕಾಂಗ್ರೆಸ್ ಸಚಿವ ಶ್ರೀರಾಮುಲು ಹಾಗೂ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಚಾಲನೆ ನೀಡಿದರು. ಪಕ್ಷ ಬೇಧವಿಲ್ಲದೆ, ಹಲವಾರು ಸಂಘಟನೆಗಳು, ವಿಚಾರವಾದಿಗಳು, ಸ್ವಾತಂತ್ರ್ಯ ಹೋರಾಟಗಾರರು, ಚಿಂತಕರು, ಸಾಹಿತಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಈ ಹೋರಾಟಕ್ಕೆ ದನಿ ಗೂಡಿಸಿದ್ದಾರೆ.
2,500ಕ್ಕೂ ಹೆಚ್ಚು ಮಂದಿ ಸೇರಿದ ಈ ಸಮಾರಂಭದ ಬಳಿಕ ಸುಮಾರು 1,500ಕ್ಕೂ ಹೆಚ್ಚು ಮಂದಿ ಪಾದಯಾತ್ರೆ ಆರಂಭಿಸಿದರು. ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ 15 ದಿನಗಳ ಕಾಲ ಐದು ಜಿಲ್ಲೆಗಳಲ್ಲಿ ಸಂಚರಿಸಿ ಅಂತಿಮವಾಗಿ ಬಳ್ಳಾರಿಗೆ ಆಗಸ್ಟ್ 9ರಂದು ತಲುಪಲಿದೆ. ನಂತರ ಅಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಐದು ಜಿಲ್ಲೆಗಳುದ್ದಕ್ಕೂ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳು ನಡೆಯಲಿವೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆರ್.ವಿ.ದೇಶಪಾಂಡೆ, ಸರ್ಕಾರದ ಪತನದ ಲಕ್ಷಣಗಳು ಈಗಲೇ ಸ್ಪಷ್ಟವಾಗಿ ಕಾಣತೊಡಗಿದೆ ಎಂದರು. ಚಿಂತಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ನಾವು ಪಕ್ಷ ಬೇಧ ಮರೆತು ಗಣಿ ಲೂಟಿಯ ವಿರುದ್ಧದ ಕಾಂಗ್ರಸಿನ ಹೋರಾಟಕ್ಕೆ ಕೈಜೋಡಿಸಿದ್ದೇವೆ. ಒಳ್ಳೆ ಕೆಲಸ ಯಾರೇ ಮಾಡಿದರೂ ಅದಕ್ಕೆ ಬೆಂಬಲ ನೀಡುವುದು ಒಂದು ನೈತಿಕ ಹೊಣೆ. ಅದನ್ನೇ ಮಾಡುತ್ತಿದ್ದೇನೆ ಎಂದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಮಾತನಾಡಿ, ಬಿಜೆಪಿಯಿಂದ ಏನೂ ಆಗೋದಿಲ್ಲ ಎಂಬುದು ಗೊತ್ತು. ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಅದು ಈವರೆಗೆ ಆಡಳಿತ ಮಾಡಿ ಅದನ್ನು ಸಾಧಿಸಿದೆ ಕೂಡಾ ಎಂದರು.
ಸಿದ್ಧರಾಮಯ್ಯ ಮಾತನಾಡಿ, ಇಡೀ ನೈಸರ್ಗಿಕ ಸಂಪತ್ತನ್ನು ಇವರು ಹಾಳು ಮಾಡಿದ್ದಾರೆ. ಶತಮಾನ ಕಂಡ ಅಥೀ ದೊಡ್ಡ ಹಗರಣವಿದು. ನೈಸರ್ಗಿಕ ಸಂಪತ್ತನ್ನು ಹಾಳುಗೆಡವುದ್ನು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಅದಕ್ಕಾಗಿಯೇ ಈ ಹೋರಾಟ ಎಂದರು.
320 ಕಿಮೀ ದೂರದ ಈ ಕಾಲ್ನಡಿಗೆ ಯಾತ್ರೆಯಲ್ಲಿ ಕನಿಷ್ಟ ಒಂದು ದಿನವಾದರೂ ಬೆಳಗ್ಗೆ 8ರಿಂದ ರಾತ್ರ 8ರವರೆಗೆ ಕಾಲ್ನಡಿಗೆ ಮಾಡಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಕಾಂಗ್ರೆಸ್ ಸರ್ಟಿಫಿಕೆಟ್ ನೀಡಲಿದೆ. ಯಾತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ಹಾಗೂ ತುರ್ತು ಸಂದರ್ಭಕ್ಕಾಗಿ ಎರಡು ಆಂಬುಲೆನ್ಸ್ ಇರಲಿವೆ. ಪ್ರತಿದಿನವೂ ಯಾತ್ರೆಯಲ್ಲಿ 1,500ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಆರಂಭದಲ್ಲೇ ಕುಸಿದು ಬಿದ್ದರು: ಬೆಳಿಗ್ಗೆ ಸಮಾರಂಭಕ್ಕೆ ಚಾಲನೆ ನೀಡುವ ಸಂದರ್ಭ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತ ರಾಮಪ್ಪ ಕುಸಿದು ಬಿದ್ದರು. ಮೂರ್ಛೆರೋಗ ಕಾಯಿಲೆಯಿಂದ ಬಳಲುತ್ತಿದ್ದ ರಾಮಪ್ಪ ಅವರನ್ನು ತಕ್ಷಣವೇ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ನಂತರ ಪಾದಯಾತ್ರೆ ಆರಭವಾದ ಕೆಲ ಗಂಟೆಗಳಲ್ಲೇ ಮತ್ತೊಬ್ಬ ಕಾಂಗ್ರೆಸ್ ಕಾರ್ಯಕರ್ತ ಚಿಕ್ಕಮಾದಯ್ಯ ಎಂಬವರು ಐಐಎಸ್ಸಿ ಬಳಿ ಕುಸಿದು ಬಿದ್ದರು. ತಕ್ಷಣ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ.
ಭಾರೀ ಸಮೂಹದ ಈ ಪಾದಯಾತ್ರೆಯ ಕಾರಣದಿಂದ ಅಕ್ಷರಶಃ ವಾಹನ ಸವಾರರು ಮಾತ್ರ ಪರದಾಡುವಂತಾಯಿತು. ಭಾರೀ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಪೊಲೀಸರೂ ಹೆಣಗಾಡಬೇಕಾಯಿತು.