ಕಾಂಗ್ರೆಸ್ ಪಾದಯಾತ್ರೆಯಲ್ಲೇ ಕುಸಿದು ಬಿದ್ದ ಕಾರ್ಯಕರ್ತ ಸಾವು!
ಬೆಂಗಳೂರು, ಭಾನುವಾರ, 25 ಜುಲೈ 2010( 16:08 IST )
ಕಾಂಗ್ರೆಸಿನ ಬೆಂಗಳೂರು- ಬಳ್ಳಾರಿ ಪಾದಯಾತ್ರೆಗೆ ಆರಂಭದಲ್ಲೇ ಕಪ್ಪು ಚುಕ್ಕೆಯಾಗಿದೆ. ಪಾದಯಾತ್ರೆಯ ವೇಳೆ ಕುಸಿದು ಬಿದ್ದ ಕಾರ್ಯಕರ್ತ ಚಿಕ್ಕಮಾರಯ್ಯ ಸಾವನ್ನಪ್ಪಿದ್ದಾರೆ.
ವಯಸ್ಸಾಯಿತು, ಇನ್ನು ಇಂಥ ಕಾಲ್ನಡಿಗೆ ಯಾತ್ರೆಗಳಿಗೆಲ್ಲ ಹೋಗಬೇಡಿ ಎಂದು ಮಕ್ಕಳು ಹೇಳಿದ್ದರೂ, ಕೇಳದೆ ಯಾತ್ರೆಗೆ ಹೊರಟ ಚಿಕ್ಕಮಾರಯ್ಯ ಇದೀಗ ತನ್ನ ಜೀವನಯಾತ್ರೆಯನ್ನೇ ಮುಗಿಸಿ ಮರಳಿ ಬಾರದ ಜಾಗಕ್ಕೆ ಹೋಗಿದ್ದು ವಿಪರ್ಯಾಸ.
ಬೆಳಗ್ಗಿನ ಸಮಾರಂಭದ ವೇಳೆಯಲ್ಲೇ ರಾಮಪ್ಪ ಎಂಬ ಕಾರ್ಯಕರ್ತ ಕುಸಿದು ಬಿದ್ದಿದ್ದರು. ಈ ಸಂದರ್ಭ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ನಂತರ ಚಿಕ್ಕ ಮಾರಯ್ಯ ಎಂಬವರು ಯಾತ್ರೆಯ ವೇಳೆ ನಗರದ ಐಐಎಸ್ಸಿ ಬಳಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಕುಸಿದು ಬಿದ್ದ ಚಿಕ್ಕ ಮಾರಯ್ಯ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದರು ಎಂದಿದ್ದಾರೆ.
ಕುಟುಂಬಕ್ಕೆ ಎರಡನೇ ಆಘಾತ: ಮೂರು ಜನ ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರನನ್ನು ಅಗಲಿರುವ ಚಿಕ್ಕಮಾರಯ್ಯ ಈಗ್ಗೆ ಕೆಲ ದಿನಗಳ ಹಿಂದಷ್ಟೇ ಮಗಳನ್ನು ಕಳೆದುಕೊಂಡಿದ್ದರು. ಆರೋಗ್ಯವಾಗಿಯೇ ಇದ್ದ ಚಿಕ್ಕ ಮಾರಯ್ಯ ಯಾವುದೇ ರೋಗದಿಂದಲೂ ಬಳಲುತ್ತಿರಲಿಲ್ಲ. ರಕ್ತದೊತ್ತಡ, ಮಧುಮೇಹ ಯಾವುದೂ ಇರಲಿಲ್ಲ ಎಂದು ಕುಟುಂಬ ತಿಳಿಸಿದೆ.
ಈಗಾಗಲೇ ತಮ್ಮ ಸಹೋದರಿಯನ್ನು ಕಳೆದುಕೊಂಡ ಚಿಕ್ಕಮಾರಯ್ಯ ಅವರ ಮಕ್ಕಳು ಇದೀಗ ತಂದೆಯನ್ನು ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದ್ದಾರೆ. ನಾವು ಹೇಳಿದಂತೆ, ಅಪ್ಪ ಈ ಯಾತ್ರೆಗೆ ಹೋಗದೆ ಮನೆಯಲ್ಲೇ ಇದ್ದಿದ್ದರೆ ಹೀಗೆ ಸಾವು ಬರುತ್ತಿರಲಿಲ್ಲವೇನೋ ಎಂದು ಮಕ್ಕಳು ಪರಿತಪಿಸುತ್ತಿದ್ದಾರೆ.
1 ಲಕ್ಷ ರೂ ಪರಿಹಾರ: ಕಾರ್ಯಕರ್ತನ ಸಾವಿಗೆ ಕಾಂಗ್ರೆಸ್ ಪಕ್ಷ ತೀವ್ರ ವಿಷಾದ ವ್ಯಕ್ತಪಡಿಸಿದೆ. ಮೃತ ಕುಟುಂಬಕ್ಕೆ ಕೆಪಿಸಿಸಿಯಿಂದ ಒಂದು ಲಕ್ಷ ರೂಪಾಯಿಗಳ ಪರಿಹಾರ ನೀಡುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ನೀಡಿದ್ದಾರೆ.
ಕಾರ್ಯಕರ್ತನ ಸಾವಿನ ಹಿನ್ನೆಲೆಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಈ ಸಾವು ನಮಗೆಲ್ಲರಿಗೂ ನೋವು ತಂದಿದೆ. ಯಾತ್ರೆಯ ವೇಳೆ ಹೀಗಾಗಿರುವುದು ತುಂಬ ದುಃಖ ತಂದಿದೆ. ಇದು ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತನೂ ಕಾಂಗ್ರೆಸ್ ಪಕ್ಷಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧನಾಗಿರುವುದು ಹಾಗೂ ಬಿಜೆಪಿಯ ಆಡಳಿತದಿಂದ ಬೇಸತ್ತಿರುವುದನ್ನು ತೋರಿಸುತ್ತದೆ. ಯಾತ್ರೆ ಮುಗಿದ ತಕ್ಷಣ ಮೃತರ ಮನೆಗೆ ತೆರಳಿ ಪರಿಹಾರ ನೀಡುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ.