ನಪುಂಸಕರನ್ನಾಗಿಸಿ ಪೀಠಾಧಿಪತಿ ನೇಮಕ ಮಾಡ್ಬೇಕು:ನಿಡುಮಾಮಿಡಿ
ದಾವಣಗೆರೆ, ಸೋಮವಾರ, 26 ಜುಲೈ 2010( 13:05 IST )
ಬ್ರಹ್ಮಚರ್ಯೆ ಅನುಸರಿಸಿದವರನ್ನೇ ಸ್ವಾಮೀಜಿ, ಪೀಠಾಧಿಪತಿಗಳನ್ನಾಗಿ ಮಾಡಬೇಕು ಎಂದಾದರೆ ಇನ್ಮುಂದೆ ಅವರನ್ನು ನಪುಂಸಕರನ್ನಾಗಿಸಿದ ಬಳಿಕವೇ ನೇಮಿಸಬೇಕಾದೀತು ಎಂದು ನಿಡುಮಾಮಿಡಿ ಸಂಸ್ಥಾನ ಮಠ ಮತ್ತು ಮಾನವ ಧರ್ಮಪೀಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ನಿಡುಮಾಮಿಡಿ ಸಂಸ್ಥಾನ ಮಠ ಭಾನುವಾರ ಆಯೋಜಿಸಿದ್ದ ಜಚನಿ ನೂರು ತುಂಬಿದ ನೆನಪು ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಮದುವೆ ಆಗುವುದು ಎಂದರೆ ನಿದ್ದೆ ಮಾಡಬೇಕು ಅಂತ ಎನಿಸಿದವನಿಗೆ ಹಾಸಿಗೆ ಹಾಸಿ ಕೊಟ್ಟಂತಾಗುತ್ತದೆ. ಇಂದು ಮಠಗಳಲ್ಲಿ ಸಾಕಷ್ಟು ಅನಾಚಾರ, ಧನದಾಹ ತುಂಬಿಕೊಂಡಿದೆ. ಆ ನಿಟ್ಟಿನಲ್ಲಿ ಮಠ-ಪೀಠಗಳನ್ನು ಗ್ರಹಸ್ಥ ಜೀವನ ನಡೆಸಿದವರು ಮುನ್ನಡೆಸುವಂತಾಗಬೇಕು ಎಂದರು.
ಹಾಗಾದರೆ ಸ್ವಾಮೀಜಿಗಳು ಮದುವೆ ಆಗಬಾರದೇ? ಎಂದು ಭಕ್ತರೊಬ್ಬರು ಪ್ರಶ್ನಿಸಿದಾಗ, ಈ ಬಗ್ಗೆ ನಾಡಿನಾದ್ಯಂತ ವ್ಯಾಪಕ ಚರ್ಚೆ ನಡೆಯಬೇಕಾಗಿದೆ. ಈ ಕ್ಷೇತ್ರಕ್ಕೆ ಒಂದಿಷ್ಟು ತ್ಯಾಗ ಮನೋಭಾವ ಬೇಕು ಎಂಬ ಉದ್ದೇಶದಿಂದ ಬ್ರಹ್ಮಚರ್ಯ ಹೊಂದಿದ್ದವರೇ ಸ್ವಾಮೀಜಿ ಆಗಬೇಕು ಎಂಬ ಪದ್ಧತಿ ಬೆಳೆದು ಬಂದಿದೆ. ಬಾಲ್ಯ, ಯೌವ್ವನದಲ್ಲಿ ಸನ್ಯಾಸಿ ಆಗುತ್ತೇವೆ ಎಂಬುದು ಸುಳ್ಳು, ಆ ವಯಸ್ಸಿನಲ್ಲಿ ಯಾವ ವಿರಕ್ತಿ ಬರಲು ಸಾಧ್ಯ ಎಂದರು.
ಇಂದು ಯಾವ (ತಮ್ಮ ಮಠ ಸೇರಿ) ಮಠದಲ್ಲಿಯೂ ಲೌಕಿಕ ಬದುಕಿನಿಂದ ಸಂಪೂರ್ಣ ವಿಮುಖವಾಗುವ, ಸಾತ್ವಿಕ ವಾತಾವರಣ ಇದೆಯೇ? ದೈಹಿಕ ತುಮುಲಗಳ ಹೊಯ್ದಾಟದ ನಡುವೆ ಸ್ವಾಮೀಜಿಗಳು ಎನಿಸಿಕೊಂಡವರಿಗೆ ವೈರಾಗ್ಯ ಬರುವುದೇ ಸಾಥ್ಯವೇ ಎಂದು ವಾಗ್ದಾಳಿ ನಡೆಸಿದರು.