ಧರ್ಮದ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ: ರಾಮಾ ಜೋಯಿಸ್
ಗುಲ್ಬರ್ಗ, ಸೋಮವಾರ, 26 ಜುಲೈ 2010( 15:49 IST )
ಪ್ರತಿಯೊಬ್ಬ ವ್ಯಕ್ತಿ ಧರ್ಮದ ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಏಕತೆ ಸಹಜವಾಗಿಯೇ ಮೂಡುತ್ತವೆ ಎಂದು ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಮತ್ತು ಮಾಜಿ ರಾಜ್ಯಪಾಲ, ರಾಜ್ಯಸಭೆ ಸದಸ್ಯ ನ್ಯಾ. ಡಾ. ಎಂ.ರಾಮಾ ಜೋಯಿಸ್ ಅಭಿಪ್ರಾಯವ್ಯಕ್ತಪಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಭಾರತೀಯ ನ್ಯಾಯದರ್ಶನದ ಮೂಲಕ ರಾಷ್ಟ್ರೀಯ ಭಾವೈಕ್ಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನಾ ಸಮಾರಂಭದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಭಾರತೀಯ ನ್ಯಾಯದರ್ಶನವು ನಮ್ಮ ರಾಷ್ಟ್ರೀಯ ಏಕತೆಯ ಮೂಲಧರ್ಮವಾಗಿದೆ. ದೇಶದ ಕಾನೂನು, ನ್ಯಾಯಾಂಗ, ಸಂವಿಧಾನ ವ್ಯವಸ್ಥೆ ಸೇರಿದಂತೆ ಮಾನವ ಜೀವನದ ಪ್ರತಿ ಚಟುವಟಿಕೆ ಸನ್ಮಾರ್ಗ, ಸನ್ನಡತೆಯಲ್ಲಿರುವಂತೆ ಮಾಡಿದ್ದೇ 'ಧರ್ಮ'. ಧರ್ಮವು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ವಿಶಾಲ ತಳಹದಿಯ ಮೇಲೆ ರೂಪಿಸಿದೆ. ಧರ್ಮವನ್ನು ಸಾಮಾನ್ಯ ಧರ್ಮ, ವ್ಯವಹಾರ ಧರ್ಮ ಹಾಗೂ ರಾಜಧರ್ಮ ಎಂದು ಮೂರು ಭಾಗಗಳಲ್ಲಿ ವಿಂಗಡಿಸಲಾಗಿದೆ ಎಂದರು.
ಸಂಸ್ಕೃತ ಭಾಷೆಯಿಂದ ಉತ್ಪತ್ತಿಯಾಗಿರುವ ಧರ್ಮ ಶಬ್ದಕ್ಕೆ ಸಮನಾದ ಪದ ಬೇರೆ ಭಾಷೆಯಲ್ಲಿ ಇಲ್ಲ. ಆಂಗ್ಲ ಭಾಷೆಯ ರಿಲಿಜನ್ ಪದಕ್ಕೆ ಸಮಾನ ಎಂದು ಅರ್ಥೈಸಿಕೊಳ್ಳಲಾಗಿದೆ. ಆದರೆ ಧರ್ಮ ಯಾವುದೇ ಜಾತಿ, ಪಂಗಡದ ಸೂಚಕವಲ್ಲ. ಸನ್ನಡತೆ, ಸನ್ಮಾರ್ಗವಷ್ಟೇ ಅದರ ತಿರುಳು. ಉನ್ನತ ಆಚಾರ ವಿಚಾರ ಹಾಗೂ ನಡತೆಯೊಂದೇ ಧರ್ಮದ ಉದ್ದೇಶ.ಸತ್ಯ, ನಿಷ್ಠೆ, ಅಹಿಂಸೆ, ಶುಚಿತ್ವ, ಇಂದ್ರಿಯ ನಿಗ್ರಹ ಈ ಎಲ್ಲವೂ ಎಲ್ಲ ವರ್ಣದವರಿಗೂ ಸಾಮಾನ್ಯ ಧರ್ಮ. ಹೀಗಾಗಿ ಧರ್ಮ ರಾಷ್ಟ್ರೀಯ ಜೀವನದ ಭದ್ರ ಬುನಾದಿಯಾಗಿದೆ ಎಂದು ಪ್ರತಿಪಾದಿಸಿದರು.