ನಾನಾ ಧರ್ಮಾಚರಣೆ, ವೈವಿಧ್ಯಮಯ ಬಹು ಸಂಸ್ಕೃತಿ ಹೊಂದಿರುವ ಭಾರತದ ರಾಷ್ಟ್ರೀಯ ಭಾವೈಕ್ಯಕ್ಕೆ ಜಾತಿ ರಾಜಕಾರಣ, ಭ್ರಷ್ಟಾಚಾರ, ಜನಸಂಖ್ಯಾ ಸ್ಫೋಟ, ಮೂಲಭೂತವಾದಿಗಳ ಕೆಲ ಮಾರಕ ನಿಲವು ಕಂಟಕವಾಗಿ ಪರಿಣಮಿಸಿವೆ ಎಂದು ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಮಾಜಿ ಅಧ್ಯಕ್ಷ ಡಾ.ಎಸ್.ರಾಜೇಂದ್ರ ಬಾಬು ಕಳವಳ ವ್ಯಕ್ತಪಡಿಸಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ, ಭಾರತೀಯ ನ್ಯಾಯದರ್ಶನದ ಮೂಲಕ ರಾಷ್ಟ್ರೀಯ ಭಾವೈಕ್ಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯಲ್ಲಿ ಏರುಪೇರು, ದಲಿತರ ಶೋಷಣೆ, ಲಿಂಗಭೇದ, ಅನಕ್ಷರತೆಗಳಿಂದಲೂ ಹೊಡೆತ ಬಿದ್ದಿದೆ. ದುರ್ವ್ಯವಹಾರಗಳು, ಹಣದಾಸೆಗೆ ದೇಶದ್ರೋಹಿ ಕೆಲಸ ಮತ್ತಿತರ ಅಕ್ರಮ ಚಟುವಟಿಕೆಗಳಿಂದ ಶಾಂತಿಗೆ ಧಕ್ಕೆಯಾಗಿ ರಾಷ್ಟ್ರದ ಏಕತೆ ಮೇಲೆ ಪರಿಣಾಮ ಬೀರುತ್ತಿದೆ ಎಂದರು.
ಹಿಂದೂ, ಕ್ರೈಸ್ತ, ಬೌದ್ಧ, ಮುಸ್ಲಿಂ, ಸಿಖ್ ಹೀಗೆ ನಾನಾ ಧರ್ಮಗಳು ಹುಟ್ಟಿದ ನಾಡು ಇದಾಗಿದ್ದು, ಭಾರತ ಎಲ್ಲ ಧರ್ಮಗಳ ತಾಯಿಯಾಗಿ ನಿಲ್ಲುತ್ತದೆ ಎಂದು ಬಣ್ಣಿಸಿದರು.
ಎಲ್ಲ ಕಾನೂನು ಶಾಸ್ತ್ರಗಳಿಗೆ ನ್ಯಾಯದರ್ಶನ ಫಿಲಾಸಫಿ ಇದ್ದಂತೆ. ಎಲ್ಲವುದರ ಸಾರ ಅದರಲ್ಲಿ ಅಡಗಿದೆ. ಇದರಿಂದಾಗಿ ಭಾರತ ಜಾತ್ಯತೀತ ರಾಷ್ಟ್ರವೆಂದು ಕರೆಸಿಕೊಳ್ಳುತ್ತಿದೆ. ನಮ್ಮಲ್ಲಿ ಭಾವೈಕ್ಯತೆಗೆ ಕೊರತೆಯಿಲ್ಲ. ಎಲ್ಲರೂ ಸೌಹಾರ್ದದಿಂದ ಬಾಳುತ್ತಿದ್ದೇವೆ. ಅದಕ್ಕಾಗಿ ವಿಶ್ವವೇ ಭಾರತದ ಕಡೆಗೆ ನೋಡುತ್ತಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.