ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್ ರಕ್ಷಣೆ ಕೋರಿದ್ದು ಹೇಡಿತನ: ಈಶ್ವರಪ್ಪ ವ್ಯಂಗ್ಯ (Ishwarappa | Congress | BJP | Karnataka | Siddaramaiah | Sonia gandhi)
ಕಾಂಗ್ರೆಸ್ ರಕ್ಷಣೆ ಕೋರಿದ್ದು ಹೇಡಿತನ: ಈಶ್ವರಪ್ಪ ವ್ಯಂಗ್ಯ
ಕೊಪ್ಪಳ, ಸೋಮವಾರ, 26 ಜುಲೈ 2010( 15:55 IST )
ಪಾದಯಾತ್ರೆಗೆ ರಕ್ಷಣೆ ಒದಗಿಸುವಂತೆ ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡರು ಮನವಿ ಮಾಡಿರುವುದು ಹೇಡಿತನ ತೋರಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷದ ಮುಖಂಡ ಸಿದ್ದರಾಮಯ್ಯ, ಬಳ್ಳಾರಿಗೆ ನಾವು ಬರ್ತೀವಿ ಯಾರೇನು ಮಾಡ್ತೀರಿ? ಎಂದು ವೀರಾವೇಶದಿಂದ ಹೇಳಿದವರಿಗೆ ಈಗ ಆ ಶಕ್ತಿ ಇಲ್ಲವೆ ? ಎಂದು ಪ್ರಶ್ನಿಸಿದರಲ್ಲದೇ, ಕಾಂಗ್ರೆಸ್‌ನವರು ಮನವಿ ಮಾಡುವ ಮುನ್ನವೇ ಸರಕಾರ ಸಂಪೂರ್ಣ ರಕ್ಷಣೆ ಒದಗಿಸಿದೆ ಎಂದರು.
ರಾಜ್ಯದಲ್ಲಿ ಪ್ರತಿಪಕ್ಷವೇ ಅಸ್ತಿತ್ವದಲ್ಲಿಲ್ಲ. ಪ್ರತಿಪಕ್ಷದವರಿಗೆ ಜೀವನ ಪರ್ಯಂತ ಪಾದಯಾತ್ರೆಯೇ ಗತಿ. ಒಳ್ಳೆಯ ಪ್ರತಿಪಕ್ಷವಿದ್ದರೇ ಸರಕಾರದ ತಪ್ಪು ಎತ್ತಿ ತೋರಿಸಿ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿದ್ದರು. ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪತಿ, ಪತ್ನಿಯರಂತೆ ನಟಿಸಿ, ಹೊರಗೆ ಬಂದಾಕ್ಷಣ ಮತ್ತೆ ಡೈವೊರ್ಸ್ ಪಡೆಯುತ್ತಾರೆ. ಇಂತಹ ಪ್ರತಿಪಕ್ಷದಿಂದ ಅಭಿವೃದ್ದಿ ಚಿಂತನೆ ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.
ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದಾಗ ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಪಕ್ಷ ಪ್ರತಿಭಟನೆ ನಡೆಸಿದವು. ಆದರೆ ರಾಜೀನಾಮೆ ವಾಪಸ್‌ಗೆ ಲೋಕಾಯುಕ್ತರ ಮನವೊಲಿಸಿದಾಗ ಆ ವಿಚಾರ ಕೈಬಿಟ್ಟು ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪ ಮುಂದುವರಿಸಿವೆ ಎಂದು ದೂರಿದರು.
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಿ ತನಿಖಾ ವ್ಯಾಪ್ತಿಯನ್ನು ದೇಶ ಮತ್ತು ವಿದೇಶಕ್ಕೂ ವಿಸ್ತರಿಸಿದೆ. ಲೋಕಾಯುಕ್ತರಿಂದ ತನಿಖೆ ನಡೆಸಲು ಸರಕಾರ ನಿರ್ಧರಿಸಿದಾಗ ಪ್ರತಿಪಕ್ಷ ವಿರೋಧ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುತ್ತಿವೆ ಎಂದರು.