ಮಾಧ್ಯಮಗಳು ಗಣಿಗಾರಿಕೆಯ ಸುದ್ದಿ ಮಾಡುವುದನ್ನು ಕೈಬಿಡಬೇಕು ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಫರ್ಮಾನು ಹೊರಡಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದರು.
ಕೇವಲ ಗಣಿಗಾರಿಕೆ ಸುದ್ದಿಗೆ ಮಹತ್ವ ನೀಡಿದರೆ ರಾಜ್ಯದ ಜನತೆಯ ಪರಿಸ್ಥಿತಿ ಏನಾಗಬೇಡ. ಜನರಿಗೆ ಗಣಿ ಸುದ್ದಿ ಬಗ್ಗೆ ಆಸಕ್ತಿ ಇಲ್ಲ. ಅವರಿಗೆ ಬೆಲೆ ಏರಿಕೆ, ವಿದ್ಯುತ್, ಕುಡಿಯುವ ನೀರು ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ. ಈ ಬಗ್ಗೆ ಮಾಧ್ಯಮಗಳು ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಕಳೆದೆರಡು ತಿಂಗಳಿಂದ ಪ್ರತಿಪಕ್ಷಗಳು ಗಣಿಗಾರಿಕೆ ವಿಷಯ ಕೈಗೆತ್ತಿಕೊಂಡು ರಾಜಕಾರಣ ಮಾಡುತ್ತಿವೆ. ಮಾಧ್ಯಮಗಳೂ ಸಹ ಗಣಿಗಾರಿಕೆ ಸಂಬಂಧಿಸಿ ರಾಜಕಾರಣಿಗಳನ್ನು ಪ್ರಶ್ನೆ ಮಾಡಿ ಸುದ್ದಿ ಮಾಡುತ್ತಿವೆ. ಇದು ಜನರಿಗೆ ಬೇಕಾಗಿಲ್ಲ ಎಂದು ಪ್ರತಿಪಾದಿಸಿದರು.
ಜನ ಕಪೋಲಕಲ್ಪಿತ ಸುದ್ದಿಗಳಿಗೆ ಮುಗಿಬೀಳುವುದರಿಂದ ಮಾಧ್ಯಮಗಳು ಸಹ ಅಂಥ ಸುದ್ದಿಗಳನ್ನೇ ವೈಭವೀಕರಿಸುತ್ತಿವೆ. ಅದನ್ನು ಮೀರಿದ ಸುದ್ದಿಗೆ ಹುಡುಕಾಟ ನಡೆಸುತ್ತಿಲ್ಲ ಎಂದು ವಿಷಾದಿಸಿದರು.