ಬೆಳಗಾವಿ/ ಶಿವಮೊಗ್ಗ, ಮಂಗಳವಾರ, 27 ಜುಲೈ 2010( 09:31 IST )
ರಾಜ್ಯದ ಹಲವೆಡೆ ಇದೀಗ ಭಾರೀ ಮಳೆ ಸುರಿಯುತ್ತಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಇದೀಗ ಒಬ್ಬರನ್ನು ಬಲಿ ತೆಗೆದುಕೊಂಡಿದೆ.
ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಭಾರೀ ಮಳೆಯಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಬೆಳಗ್ಗಿನಿಂದ ಸಂಜೆವರೆಗೆ ಮಳೆ ಎಡೆಬಿಡದೆ ಸುರಿಯುತ್ತಿದ್ದು, ಮನೆಯ ಗೋಡೆ ಕುಸಿದು ಮನೆಯಲ್ಲಿ ಸೋಮವಾರ ತಡರಾತ್ರಿ ಮಲಗಿದ್ದ ಎಲ್ಲಮ್ಮ (35) ಸಾವನ್ನಪ್ಪಿದ್ದಾರೆ. ಆದರೆ ಮನೆಯಲ್ಲಿದ್ದ ಬೇರೆ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ.
ಶಿವಮೊಗ್ಗ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,770 ಅಡಿಯ ಗಡಿ ದಾಟಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಒಂದೇ ದಿನದಲ್ಲಿ ಎರಡುವರೆ ಅಡಿ ನೀರು ಏರಿದ್ದು, ಇದರಿಂದ ಪ್ರವಾಹದ ಭೀತಿ ಎದುರಾಗಿದೆ.
ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕುಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ಶಿವಮೊಗ್ಗ, ಭದ್ರಾವತಿ, ಸೊರಬ, ಶಿಕಾರಿಪುರದಲ್ಲೂ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿದಿದೆ. ಇದೇ ರೀತಿ ಇನ್ನೆರಡು ದಿನ ಮಳೆಯಾದಲ್ಲಿ ನೆರೆಯ ಭೀತಿ ಇದೀಗ ಜನರಲ್ಲಿ ಮನೆಮಾಡಿದೆ.
ಇದೇ ವೇಳೆ, ರಾಜ್ಯಕ್ಕೆ ಹೊಂದಿಕೊಂಡೇ ಇರುವ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿಯ ರಾಯಬಾಗ ತಾಲೂಕಿನ ಕುಡಚಿ ಬಳಿಯ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು ಪ್ರವಾಹದ ಆತಂಕ ಎದುರಾಗಿದೆ.
ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕುಡಚಿ ಬಳಿ ಕೃಷ್ಣಾ ನದಿಯ ಪ್ರವಾಹ 11 ಮೀಟರುಗಳಷ್ಟು ಏರಿತ್ತು. ಇದೇ ರೀತಿಯಲ್ಲಿ ನೀರಿನ ಮಟ್ಟ ಏರಿದಲ್ಲಿ ಕರ್ನಾಟಕ ಮಹಾರಾಷ್ಟ್ರ ರಸ್ತೆ ಸಂಪರ್ಕವೇ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಚಿಕ್ಕೋಡಿ ಜಿಲ್ಲೆಯಲ್ಲೂ ಮಳೆರಾಯನ ಆರ್ಭಟ ಮುಂದುವರಿದಿದ್ದು ಕೃಷ್ಣಾ ಹಾಗೂ ಉಪನದಿಗಳಾದ ಧೂದ್ ಗಂಗಾ, ವೇದಗಂಗಾ ನದಿಗಳ ಒಳಹರಿವಿನಲ್ಲಿ ಕ್ಷಣಕ್ಷಣವೂ ನೀರಿನ ಮಟ್ಟ ಹೆಚ್ಚುತ್ತಿದೆ.
ಇದೇ ವೇಳೆ ಮಡಿಕೇರಿಯಲ್ಲೂ ಭಾರೀ ಮಳೆಯಾಗುತ್ತಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಹಾರಂಗಿ ಜಲಾಶಯದಲ್ಲೂ ನೀರಿನ ಮಟ್ಟ ಏರುತ್ತಿದೆ.