ಅಕ್ರಮ ಗಣಿ ಹಗರಣವನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ಹಠಹಿಡಿದಿರುವ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸರಕಾರದ ಅಧೀನಕ್ಕೆ ಬರುವ ಹತ್ತು ಬಂದರುಗಳಿಂದ ಕಬ್ಬಿಣ ಅದಿರು ರಫ್ತನ್ನು ಕೂಡಲೇ ಜಾರಿಗೆ ಬರುವಂತೆ ನಿಷೇಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರಿ ಆಜ್ಞೆ ಹೊರಡಿಸಿದ್ದಾರೆ.
ಕಾರವಾರ, ಬೇಲೇಕೇರಿ, ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ, ಮಲ್ಪೆ, ಹಂಗಾರಕಟ್ಟೆ, ಹಳೇಮಂಗಳೂರು ಹಾಗೂ ಪಡುಬಿದ್ರೆ ಬಂದರುಗಳಿಂದ ಮುಂದಿನ ಆದೇಶದವರೆಗೆ ಕಬ್ಬಿಣ ಅದಿರನ್ನು ರಫ್ತು ಮಾಡುವಂತಿಲ್ಲ ಎಂದು ಭಾನುವಾರ ಹೊರಡಿಸಿರುವ ಸರಕಾರಿ ಆಜ್ಞೆಯಲ್ಲಿ ತಿಳಿಸಲಾಗಿದೆ.
ರಾಜ್ಯದಿಂದ ಅನಧಿಕೃತ-ಅಕ್ರಮ ಖನಿಜಗಳ ಸಾಗಾಣಿಕೆ ಹಾಗೂ ರಫ್ತು ತಡೆಗಟ್ಟುವ ಹಿನ್ನೆಲೆಯಲ್ಲಿ ಸಾರ್ವಜನಿಕ ಮತ್ತು ಸರಕಾರದ ನಿಯಮಗಳನ್ನು ಸಮರ್ಪಕವಾಗಿ ಜಾರಿಗೆ ತರುವ ದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದೆ. ರಾಜ್ಯಪಾಲರ ಆದೇಶದ ಅನುಸಾರವಾಗಿ ಹೊರಡಿಸಿರುವ ಆಜ್ಞೆಯಲ್ಲಿ ಸೂಚನೆ ನೀಡಲಾಗಿದೆ. ಅಲ್ಲದೆ, ಕೇಂದ್ರದ ಸುಪರ್ದಿಯಲ್ಲಿರುವ ನವಮಂಗಳೂರು ಬಂದರಿನಿಂದ ಕಬ್ಬಿಣ ಅದಿರು ರಫ್ತು ಮಾಡಲು ತೊಂದರೆಯಿಲ್ಲ.
ರಾಜ್ಯದಲ್ಲಿನ ಬಂದರುಗಳಿಂದ ಖನಿಜ ರಫ್ತನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ಭಾನುವಾರ ಪತ್ರ ಮುಖೇನ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸರಕಾರಿ ಆದೇಶ ಹೊರಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.