ಮಠಮಾನ್ಯಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸಮಾಜದ ಸ್ವಾಸ್ಥ್ಯ ಕೆಡಿಸಿದಂತೆ ಎಂದು ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.
ನಗರದ ತಣ್ಣೀರುಹಳ್ಳ ಮಠದ ನೂತನ ಪೀಠಾಧಿಪತಿ ಇಮ್ಮಡಿ ಶಿವಲಿಂಗಸ್ವಾಮೀಜಿ ಅವರಿಗೆ ಏರ್ಪಡಿಸಿದ್ದ ಭಕ್ತಿ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಎಲ್ಲಿಯವರೆಗೆ ಜನಸಾಮಾನ್ಯರು ಧರ್ಮ ಹಾಗೂ ಮಠಗಳ ಬಗ್ಗೆ ಗೌರವ ಭಾವನೆ ಹೊಂದಿರುತ್ತಾರೋ ಅಲ್ಲಿಯವರೆಗೆ ಧರ್ಮ ಅವರನ್ನು ರಕ್ಷಿಸುತ್ತದೆ. ಎಲ್ಲರೂ ಸಂಕುಚಿತ ಭಾವನೆ ತೊರೆದು ಸಾಮರಸ್ಯದ ಬದುಕು ಸಾಗಿಸಬೇಕು ಎಂದು ಕಿವಿ ಮಾತು ಹೇಳಿದರು.
ಮಠಗಳು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ದೇಶದ ಅಭಿವೃದ್ದಿಗೆ ಕೊಡುಗೆ ನೀಡಬೇಕು. ಸಾಮಾಜಿಕ ಬದಲಾವಣೆ ತರಲು ಶ್ರಮಿಸಬೇಕು ಎಂದರು. ಸಮಾಜದ ಎಲ್ಲ ಸ್ತರಗಳಲ್ಲೂ ದುಷ್ಟ ಮನಸ್ಸುಗಳು ಪ್ರವೇಶಿಸಿರುವುದು ಆತಂಕಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ವಿಷಮ ಸಂದರ್ಭದಲ್ಲಿ ಮಠಮಾನ್ಯಗಳು ಸಮಾಜದ ಅಭ್ಯುದಯಕ್ಕೆ ಶ್ರಮಿಸಿ ದಾರಿದೀಪವಾಗಬೇಕು ಎಂದರು.