ಡಿಸೆಂಬರ್ ಅಂತ್ಯಕ್ಕೆ ಆಸರೆ ಮನೆ ಹಸ್ತಾಂತರ: ಕರುಣಾಕರ ರೆಡ್ಡಿ
ಸುರಪುರ, ಮಂಗಳವಾರ, 27 ಜುಲೈ 2010( 15:28 IST )
ನೆರೆ ಸಂತ್ರಸ್ತರಿಗಾಗಿ ರಾಜ್ಯಾದ್ಯಂತ ನಿರ್ಮಿಸುತ್ತಿರುವ ಆಸರೆ ಮನೆಗಳನ್ನು ಡಿಸೆಂಬರ್ ವೇಳೆಗೆ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು ಎಂದು ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಭರವಸೆ ನೀಡಿದ್ದಾರೆ.
ಮನೆಗಳ ನಿರ್ಮಾಣ ಕಾರ್ಯ ಎಲ್ಲ ಕಡೆ ಭರದಿಂದ ಸಾಗಿದ್ದು, ಪ್ರಮುಖವಾಗಿ ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ನೀಡಲಾಗುವುದು ಎಂದರು.
ಸುರಪುರ ತಾಲೂಕಿನ ಬಂಡೋಳ್ಳಿ ಮತ್ತು ತಿಂಥಣಿ ಗ್ರಾಮಗಳಲ್ಲಿ ನಿರ್ಮಾಣ ಹಂತದ ಮನೆಗಳನ್ನು ಪರಿಶೀಲಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಮನೆ ಕಟ್ಟಿಸಿ ಕೊಡುವುದಾಗಿ ಈ ಮೊದಲು ಮುಂದೆ ಬಂದಿದ್ದ ಅನೇಕ ದಾನಿಗಳು ಆನಂತರ ಹಿಂದೇಟು ಹಾಕಿದ್ದಾರೆ. ಅಲ್ಲದೆ ಕೆಲ ತಾಂತ್ರಿಕ ತೊಂದರೆಗಳಿಂದ ಮನೆಗಳ ನಿರ್ಮಾಣದಲ್ಲಿ ಹಿನ್ನಡೆಯಾಗಿದೆ. ಸದ್ಯಕ್ಕಂತೂ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಮನೆ ಕಟ್ಟಿಕೊಡುವ ಕಾರ್ಯ ಚುರುಕುಗೊಳಿಸಲಾಗಿದೆ ಎಂದರು.
ಮನೆಗಳ ನಿರ್ಮಾಣದ ಜತೆಗೆ ವಾಸಿಸಲು ಅಗತ್ಯವಾದ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ಆಸ್ಪತ್ರೆ, ಸಮುದಾಯ ಭವನ ಮತ್ತು ಧಾರ್ಮಿಕ ಮಂದಿರವನ್ನು ಸರಕಾರ ನಿರ್ಮಿಸಿ ಕೊಡಲಿದೆ ಎಂದು ತಿಳಿಸಿದರು.