ನಿತ್ಯಾನಂದ ವಿರುದ್ಧ ಬರೆದ್ರೆ ಹುಷಾರ್!:ಮಾಧ್ಯಮಕ್ಕೆ ಆಶ್ರಮ
ರಾಮನಗರ, ಬುಧವಾರ, 28 ಜುಲೈ 2010( 11:24 IST )
ಆಶ್ರಮದ ವಿರುದ್ಧ ಸುದ್ದಿಗಳನ್ನು ತಿರುಚಿ ಪ್ರಸಾರ ಮಾಡುತ್ತಿರುವ ಹಾಗೂ ಪ್ರಕಟಿಸುತ್ತಿರುವ ಮಾಧ್ಯಮಗಳ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಬಿಡದಿ ಜ್ಞಾನಪೀಠದ ನಿತ್ಯಾನಂದ ಸ್ವಾಮೀಜಿಯ ಆಪ್ತ ಸಹಾಯಕ ಭಕ್ತಾನಂದ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶ್ರಮದ ವಿರುದ್ಧ ಸುದ್ದಿಗಳು ತಿರುಚಿ ಪ್ರಸಾರ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅನಗತ್ಯವಾಗಿ ಧ್ಯಾನಪೀಠದ ವಿರುದ್ಧ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ. ಇದರಿಂದಾಗಿ ಪೀಠದ ಬಗ್ಗೆ ಭಕ್ತಾದಿಗಳಲ್ಲಿ ತಪ್ಪು ಸಂದೇಶ ರವಾನೆಯಾಗಲಿದೆ ಎಂದರು.
ಭಾನುವಾರ ನಡೆದ ಪೀಠದ ಗುರುಪೂರ್ಣಿಮೆ ಕಾರ್ಯಕ್ರಮದ ಬಗ್ಗೆ ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ, ಸುದ್ದಿಯನ್ನು ಪ್ರಸಾರ ಮಾಡಿವೆ ಎಂದು ದೂರಿದರು. ಇದು ಪೀಠವನ್ನು ತೇಜೋವಧೆ ಮಾಡುವ ತಂತ್ರವಾಗಿದ್ದು, ಈ ಸಂಬಂಧ ಕಾನೂನು ಮೊರೆ ಹೋಗುವುದಾಗಿ ಎಚ್ಚರಿಸಿದರು.
ಉದ್ದೇಶಪೂರ್ವಕವಾಗಿಯೇ ಬಿಡದಿಯ ಜ್ಞಾನಪೀಠದ ಬಗ್ಗೆ ಹಾಗೂ ನಿತ್ಯಾನಂದ ಸ್ವಾಮೀಜಿ ಬಗ್ಗೆ ಸುದ್ದಿಗಳನ್ನು ತಿರುಚಿ ಬರೆಯಲಾಗುತ್ತಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು. ಧ್ಯಾನಪೀಠದ ವತಿಯಿಂದ ಬಿಡದಿ ಸುತ್ತಮುತ್ತಲಿನ 1,800 ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರಗಳನ್ನು ನೀಡಲಾಗಿದೆ ಎಂದರು.