ಅಕ್ರಮ ಗಣಿಗಾರಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಮುಂದುವರಿಯುತ್ತಿರುವ ನಡುವೆಯೇ ಆರೋಗ್ಯ ಸಚಿವ ಶ್ರೀರಾಮುಲು ರಾಜೀನಾಮೆ ನೀಡುತ್ತಾರೆಂಬ ಸುದ್ದಿ ರಾಜ್ಯರಾಜಕಾರಣದಲ್ಲಿ ಮಹತ್ವದ ತಿರುವು ಪಡೆದುಕೊಂಡಿದೆ.
ಸಚಿವ ಶ್ರೀರಾಮುಲು ರಾಜೀನಾಮೆ ನೀಡುತ್ತಾರೆಂಬ ವದಂತಿ ಕಳೆದ ನಾಲ್ಕೈದು ದಿನಗಳಿಂದ ಹಬ್ಬಿದ್ದು, ಬುಧವಾರ ಹಾವಂಬಾವಿಯಲ್ಲಿರುವ ಶ್ರೀರಾಮುಲು ನಿವಾಸದ ಎದುರು ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಅಲ್ಲದೇ ಈ ಸಂದರ್ಭದಲ್ಲಿ ಜಿಲ್ಲಾ ಬಿಜಿಪಿ ಘಟಕ ದಿಢೀರ್ ಸಭೆ ನಡೆಸಲು ಮುಂದಾಗಿದೆ.
ಆದರೆ ಶ್ರೀರಾಮುಲು ರಾಜೀನಾಮೆ ವದಂತಿ ಕುರಿತು ಸಚಿವರಾಗಲಿ, ಬಿಜೆಪಿ ಜಿಲ್ಲಾ ಘಟಕವಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಕ್ರಮ ಗಣಿಗಾರಿಕೆ ಕುರಿತಂತೆ ರಾಜ್ಯದ ಹತ್ತು ಬಂದರಿನಿಂದ ಅದಿರು ರಫ್ತು ನಿಷೇಧ, ಹೊಸ ಪರವಾನಿಗೆ ನಿಷೇಧಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿರುವುದು ಬಳ್ಳಾರಿ ಗಣಿಧಣಿಗಳಿಗೆ ಮತ್ತು ಶ್ರೀರಾಮುಲು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಅಷ್ಟೇ ಅಲ್ಲ ದೆಹಲಿಯಲ್ಲಿ ಮುಖ್ಯಮಂತ್ರಿಗಳು ಬೀಡು ಬಿಟ್ಟಿದ್ದ ಸಂದರ್ಭದಲ್ಲಿ ಪಕ್ಷದ ವರಿಷ್ಠ ಆಡ್ವಾಣಿ, ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ರೆಡ್ಡಿ ಸಹೋದರರ ಮೇಲೆ ನಿಯಂತ್ರಣ ಹೇರಬೇಕೆಂದು ಒತ್ತಡ ಹೇರಿದ್ದಾರೆನ್ನಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ರೆಡ್ಡಿ ಸಹೋದರರ ವಿರುದ್ಧವೇ ಗದಾಪ್ರಹಾರ ಮಾಡಿರುವುದು ಶ್ರೀರಾಮುಲು ರಾಜೀನಾಮೆಗೆ ಕಾರಣ ಎಂದು ಮೂಲವೊಂದು ತಿಳಿಸಿದೆ.
ರಾಜೀನಾಮೆ ವದಂತಿ ಸುಳ್ಳು-ಜನಾರ್ದನ ರೆಡ್ಡಿ: ಸಚಿವ ಶ್ರೀರಾಮುಲು ರಾಜೀನಾಮೆ ವದಂತಿ ಬರೇ ಸುಳ್ಳು ಎಂದು ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ಉದ್ದೇಶಿತ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸುವ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಘಟಕ ದಿಢೀರ್ ಸಭೆ ಆಯೋಜಿಸಿದೆ. ಸಭೆಯಲ್ಲಿ ಜನಾರ್ದನ ರೆಡ್ಡಿ, ಶ್ರೀರಾಮುಲು, ಬಳ್ಳಾರಿಯ ಶಾಸಕರು, ಸಂಸದರು, ಪಕ್ಷದ ಮುಖಂಡರು ಭಾಗವಹಿಸುತ್ತಾರೆ ಎಂದರು.