ರಾಜ್ಯದಲ್ಲಿ ಆಡಳಿತವನ್ನು ಚುರುಕುಗೊಳಿಸಲು ಪ್ರತಿ ಇಲಾಖೆಗೆ ಪರಿಣಿತರ ತಂಡ ರಚಿಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸಂಪುಟದಲ್ಲಿರುವ ಎಲ್ಲ ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆಡಳಿತ ಮತ್ತಷ್ಟು ಚುರುಕುಗೊಳಿಸಲು ಪರಿಣಿತರ ತಂಡ ರಚನೆಯ ಅಗತ್ಯತೆ ಇದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಿವೃತ್ತರಾಗಿರುವ ಹಿರಿಯ ಅಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು ಪರಿಣಿತ ತಂಡದಲ್ಲಿರುತ್ತಾರೆ. ಈ ಕುರಿತು ಈಗಾಗಲೇ ಆಯಾ ಸಚಿವರಿಗೆ ತಿಳಿಸಲಾಗಿದೆ. ಅವರೇ ನೇಮಿಸಿಕೊಂಡರೆ ನೇಮಿಸಿಕೊಳ್ಳಲಿ, ಸಹಾಯ ಕೇಳುವ ಸಚಿವರಿಗೆ ಪಕ್ಷವೇ ನೇಮಿಸಿ ಕೊಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಚಿವ ಸಂಪುಟವನ್ನು ಶೀಘ್ರದಲ್ಲಿಯೇ ಪುನಾರಚನೆ ಮಾಡಲಾಗುವುದು ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಲಾಗುವುದು. ಸಚಿವರಿಲ್ಲದ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುವುದು, ನಿಗಮ ಮಂಡಳಿ ನೇಮಕದಲ್ಲಿ ಸಹ ಆ ಜಿಲ್ಲೆಗಳಿಗೆ ಹೆಚ್ಚಿನ ಸ್ಥಾನ ನೀಡಲಾಗುವುದು ಎಂದರು.
ಸಂಪುಟ ಪುನಾಚರನೆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ, ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ ಅಂತಿಮಗೊಳಿಸಲಾಗುವುದು, ನಿಗಮ-ಮಂಡಳಿಗಳಿಗೆ ಶಾಸಕರನ್ನು ನೇಮಿಸಲಾಗುವುದು ಎಂದರು.