ಗೋಹತ್ಯೆ ನಿಷೇಧ ಕಾಯಿದೆಗಾಗಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ನಗರದ ವಿದ್ಯಾನಗರ ಶ್ರೀಕೃಷ್ಣ ಮಂದಿರ ಜಯತೀರ್ಥ ವಿದ್ಯಾರ್ಥಿನಿಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಗೋಹತ್ಯೆ ನಿಷೇಧ ವಿರೋಧಿಸಿದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಾಗಾಂಧೀಜಿಗೆ ಅಗೌರವ ತೋರಿದಂತಾಗುತ್ತದೆ. ಹೀಗಾಗಿ ಪಕ್ಷಭೇದ ಮರೆತು ಎಲ್ಲರೂ ಗೋಹತ್ಯೆ ನಿಷೇಧ ವಿಧೇಯಕ ಬೆಂಬಲಿಸಬೇಕು ಎಂದರು.
ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ವೋಟ್ ಬ್ಯಾಂಕ್ ರಾಜಕೀಯ ಬೇಡ. ಯಾವುದೇ ಒಂದು ಕೋಮು ಓಲೈಸಲು ವಿರೋಧ ವ್ಯಕ್ತಪಡಿಸಬಾರದು. ದೇಶದ ಆರ್ಥಿಕ ದೃಷ್ಟಿಯಿಂದ ಪಶುಸಂಪತ್ತು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಕೇಂದ್ರ, ರಾಜ್ಯ ಸರಕಾರಗಳು ಸಮನ್ವಯದೊಂದಿಗೆ ಅಕ್ರಮ ಗಣಿಗಾರಿಕೆ ತಡೆಯಬಹುದು. ವಿಶೇಷವಾಗಿ ಕೇಂದ್ರ ಸರಕಾರ ಅದಿರು ರಫ್ತು ಮಾಡುವುದನ್ನು ತಡೆಯಬೇಕು ಎಂದರು.