ಅಕ್ರಮ ಗಣಿಗಾರಿಕೆ ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಸ್ವಾರ್ಥ ಅಡಗಿದೆ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಿರ್ಜಿವವಾಗಿತ್ತು. ಆ ಕಾರಣದಿಂದ ಚೈತನ್ಯ ತುಂಬಲು ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ. ಗಣಿ ಅಕ್ರಮದ ವಿರುದ್ಧ ಜನಪರ ಹೋರಾಟಕ್ಕೆ ಜೆಡಿಎಸ್ ಬೆಂಬಲವಿದೆ. ಅದೇ ರೀತಿ ಸ್ವಾರ್ಥ, ಜನವಿರೋಧಿ ನಿಲುವಿಗೆ ವಿರೋಧವಿದೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ ವಿರುದ್ಧ ವಿಧಾನಸಭೆಯಲ್ಲಿ ಧರಣಿ, ಪ್ರತಿಭಟನೆಯ ಪರಿಕಲ್ಪನೆಗೆ ಚಾಲನೆ ನೀಡಿದ್ದೇ ಜೆಡಿಎಲ್‌ಪಿ ಮುಖಂಡ ಎಚ್.ಡಿ.ರೇವಣ್ಣ. ಆದ್ದರಿಂದ ರಾಜ್ಯದ ಸಂಪತ್ತು ಉಳಿಯಬೇಕು. ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂಬ ನಿಲುವು ಹಾಗೂ ಒತ್ತಾಯದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
ಕುಡಿಯುವ ನೀರಿನ ಯೋಜನೆಗಾಗಿ ಪ್ರತಿ ಕ್ಷೇತ್ರದ ಟಾಸ್ಕ್‌ಫೋರ್ಸ್‌ಗೆ 25 ಲಕ್ಷ ರೂ. ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿ ಮಾತಿಗೆ ತಪ್ಪಿದ್ದಾರೆ. ಭರವಸೆ ನೀಡಿ ಎರಡು ವರ್ಷದಲ್ಲಿ ಕೊಟ್ಟಿರುವುದು 10 ಲಕ್ಷ ರೂ. ಮಾತ್ರ. ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಲು ಸಾಧ್ಯವಿರುವಾಗ ಕುಡಿಯುವ ನೀರಿನ ಯೋಜನೆ ಬಗ್ಗೆ ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿದರು.
ಹೇಮಾವತಿ ಜಲಾಶಯ ಹಿನ್ನೀರು ಪ್ರದೇಶದ 18 ನೆರೆಪೀಡಿತ ಗ್ರಾಮಗಳ ಸ್ಥಳಾಂತರ ಹಾಗೂ ಪುನರ್ವಸತಿ ಸೌಲಭ್ಯದ ಬಗ್ಗೆ ಸರಕಾರಕ್ಕೆ ಇಚ್ಛಾಶಕ್ತಿ ಬೇಕು. ಜನರ ಸಮಸ್ಯೆ ಅರಿತು ಸಿಎಂಗೆ ಒತ್ತಡ ತರಲಾಗಿದೆ. ನೀರಾವರಿ ಸಲಹಾ ಸಮಿತಿ ಶೀಘ್ರ ಸರ್ವೇ ಆರಂಭಿಸುವ ಸಾಧ್ಯತೆ ಇದೆ ಎಂದರು.