ಅದಿರು ರಪ್ತು ನಿಷೇಧ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರಕ್ಕೆ ತಾವು ಬದ್ಧ ಎಂದು ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅದಿರು ರಪ್ತು ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.
ಇದಕ್ಕೂ ಮೊದಲು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ರಾಜ್ಯದ 10 ಬಂದರುಗಳಿಂದ ಅದಿರು ರಪ್ತು ನಿಷೇಧ ಮಾಡಿದ ವಿಷಯ ತಿಳಿದಿತ್ತು. ಆದರೆ ಅದಿರು ರಪ್ತು ನಿಷೇಧ ವಿಷಯ ಕೇಂದ್ರಕ್ಕೆ ಬರುತ್ತೋ ರಾಜ್ಯಕ್ಕೆ ಬರುತ್ತೋ ತಮಗೆ ಗೊತ್ತಿಲ್ಲ ಎಂದು ಉತ್ತರಿಸಿ ಜಾರಿಕೊಂಡರು.
ಸಕ್ರಮ ಅದಿರು ರಫ್ತಿಗೆ ನಿಷೇಧ ಹೇರಿದರೆ ಸಂತೋಷ್ ಲಾಡ್ ಕೋರ್ಟ್ ಮೆಟ್ಟಿಲು ಏರುತ್ತಾರೆಂಬ ಪ್ರಶ್ನೆಗೆ, ನ್ಯಾಯಾಲಯಕ್ಕೆ ಹೋಗಲು ಎಲ್ಲರಿಗೂ ಅವಕಾಶವಿದೆ ಎಂದರು.
ಸಾಹಿತಿಗಳು, ಮಠಾಧೀಶರು ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಕುರಿತ ಪ್ರಶ್ನೆಗೆ, ಸಂತೋಷ...ಎಂದರು. ಅಬಕಾರಿ ಸಚಿವ ರೇಣುಕಾಚಾರ್ಯ ರೆಡ್ಡಿಗಳಿಗೆ ಹೆದರುವುದಿಲ್ಲ ಎಂಬ ಹೇಳಿಕೆಗೆ 'ನಾವು ಅವರನ್ನು ಬೆಂಬಲಿಸಿ ಎಂದು ಕೇಳಿಯೂ ಇಲ್ಲ. ಬೆದರಿಸಿಯೂ ಇಲ್ಲ' ಎಂದು ವ್ಯಂಗ್ಯವಾಡಿದರು.