ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಎಲ್ಲ ಜಲಾಶಯಗಳು ಪೂರ್ಣ ಭರ್ತಿಯಾಗಲುವವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಗೃಹಸಚಿವ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ರೈತರು ಆತಂಕ ಪಡಬೇಕಾಗಿಲ್ಲ. ಚಳವಳಿಗಾಗಿ ಬೀದಿಗೆ ಇಳಿಯಬೇಕಾಗಿಲ್ಲ ಎಂದು ಮನವಿ ಮಾಡಿಕೊಂಡರು.
ನನಗೆ ನಮ್ಮ ರಾಜ್ಯ ಮತ್ತು ನಮ್ಮ ರೈತರ ಹಿತಾಸಕ್ತಿ ಕಾಪಾಡುವುದೇ ಮುಖ್ಯವಾಗಿದೆ. ಅದಕ್ಕೆ ನಾವು ಬದ್ದರಾಗಿದ್ದೇವೆ. ನಮ್ಮ ಜಲಾಶಯ ಪೂರ್ಣ ಭರ್ತಿಯಾಗುವವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವುದಿಲ್ಲ ಎಂದರು.
ಈಗಾಗಲೇ ಕೇರಳದಲ್ಲಿ ಮುಂಗಾರು ಜೋರಾಗಿರುವುದರಿಂದ ಮತ್ತು ವೈನಾಡು ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕಪಿಲಾ ಜಲಾಶಯ ಪೂರ್ಣ ಭರ್ತಿಯಾಗಿದೆ. ಜಲಾಶಯಕ್ಕೆ 23ಸಾವಿರ ಕ್ಯೂಸೆಕ್ಸ್ ಹರಿದು ಬರುತ್ತಿದೆ. ಅದೇ ರೀತಿ ಹಾರಂಗಿ ಪೂರ್ಣ ಭರ್ತಿಯಾಗಿದೆ. ಜಲಾಶಯಕ್ಕೆ 16,800 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಎಂದರು.
ಕುಡಿಯುವ ನೀರು ಮತ್ತು ಬೇಸಾಯಕ್ಕಾಗಿ ಕೆಆರ್ಎಸ್ ಅಚ್ಚುಕಟ್ಟು ವಿಭಾಗದಲ್ಲಿ ಜಲಾಶಯದಿಂದ ಮಹಾರಾಷ್ಟ್ರ ಕಾಲುವೆಗೆ ಮೂರು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ರೈತರು ಮಾಡಿಕೊಂಡ ಮನವಿ ಮೇರೆಗೆ ನೀರನ್ನು ಬಿಡಲಾಗಿದೆಯೇ ಹೊರತು ಬೇರೆ ಉದ್ದೇಶ ಇಲ್ಲ. ಆದ್ದರಿಂದ ರೈತರು ತಪ್ಪು ತಿಳಿವಳಿಕೆಯಿಂದ ಯಾರದೋ ಮಾತು ಕೇಳಿಕೊಂಡು ಬೀದಿಗಿಳಿದು ಪ್ರತಿಭಟನಾ ಚಳವಳಿ ಮಾಡುವುದನ್ನು ಕೈಬಿಡಬೇಕು ಎಂದು ಮನವಿ ಮಾಡಿಕೊಂಡರು.