ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಬೆನ್ನಲ್ಲೇ, ಮಹತ್ವದ ಬೆಳವಣಿಗೆ ಎಂಬಂತೆ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ನಿಷೇಧ ಹೇರಲು ರಾಜ್ಯ ಸರಕಾರ ಮುಂದಾಗುವ ಮೂಲಕ ರೆಡ್ಡಿ ಸಹೋದರರಿಗೆ ದೊಡ್ಡ ಹೊಡೆತ ಬಂದಂತಾಗಿದೆ.
ಅದಿರು ಸಾಗಾಟ ರಫ್ತು ಪರ್ಮಿಟ್ ರದ್ದು ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದು, ಅಕ್ರಮ ಗಣಿಗಾರಿಕೆ ಕುರಿತಂತೆ ಲೋಕಾಯುಕ್ತ ವರದಿ ಸಲ್ಲಿಕೆಯಾಗುವವರೆಗೂ ಈ ತಡೆಯಾಜ್ಞೆ ಮುಂದುವರಿಯಲಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಕಬ್ಬಿಣ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರಿ ರಾಜ್ಯ ಸರಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ ಎಂದು ತಿಳಿಸಿದರು.
ಅಕ್ರಮ ಗಣಿಗಾರಿಕೆ, ರಫ್ತು ಕುರಿತಂತೆ ವಿಪಕ್ಷಗಳ ಒತ್ತಡ ಹೆಚ್ಚುತ್ತಿರುವ ತನ್ಮಧ್ಯೆಯೇ, ಸೋಮವಾರ ಮುಖ್ಯಮಂತ್ರಿಗಳು ಮಂಗಳೂರು ಮುಖ್ಯ ಬಂದರು ಹೊರತುಪಡಿಸಿ ರಾಜ್ಯದ ಹತ್ತು ಬಂದರುಗಳಲ್ಲಿ ಅದಿರು ರಫ್ತು ನಿಷೇಧಕ್ಕೆ ಆದೇಶ ನೀಡಿದ್ದರು. ಮಂಗಳೂರು ಬಂದರು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಬರುವುದರಿಂದ ಅದನ್ನು ಹೊರತುಪಡಿಸಿ ಆದೇಶ ಹೊರಡಿಸಿದ್ದರು.
ಅಕ್ರಮ ಗಣಿಗಾರಿಕೆಯ ಬಹುಕೋಟಿ ರೂಪಾಯಿ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತಾರೂಢ ಬಿಜೆಪಿ ಸರಕಾರ ಮೇಲೆ ತೀವ್ರವಾಗಿ ಒತ್ತಾಯಿಸುತ್ತಿವೆ. ಆದರೆ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಲಾಗಿದೆ ಯಾವುದೇ ಕಾರಣಕ್ಕೂ ಸಿಬಿಐಗೆ ಒಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ರಾಜ್ಯರಾಜಕಾರಣದಲ್ಲಿ ಜಂಗಿಕುಸ್ತಿ ಮುಂದುವರಿದಿತ್ತು.
ಇದೀಗ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯಾದ್ಯಂತ ಅದಿರು ರಫ್ತಿಗೆ ಸಂಪೂರ್ಣ ನಿಷೇಧ ಹೇರುವ ದಿಟ್ಟ ನಿರ್ಧಾರ ಕೈಗೊಂಡಿದೆ.