''ಅದಿರು ಸಾಗಣೆ ದಾರಿಯುದ್ದಕ್ಕೂ ಅಧಿಕಾರಿಗಳು ಶಾಮೀಲಾಗಿರುವುದು ನನಗೆ ತಿಳಿದಿದೆ. ಶೀಘ್ರದಲ್ಲೇ ಆಡಳಿತಕ್ಕೆ ಚುರುಕು ನೀಡುತ್ತೇನೆ. ಕಾದು ನೋಡಿ'' ಹೀಗೆ ಹೇಳಿದ್ದು ಇನ್ಯಾರೂ ಅಲ್ಲ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.
ಅದಿರು ರಫ್ತು ನಿಷೇಧ ನಿರ್ಧಾರ ಕೈಗೊಂಡ ಸಂದರ್ಭ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಪಕ್ಷದ ಹೈಕಮಾಂಡ್‌ನ ಅನುಮತಿ ಪಡೆದೇ ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಪ್ರಧಾನಿಯವರನ್ನು ಕಂಡು ಅದಿರು ರಫ್ತು ನಿಷೇಧ ಮಾಡಲು ಆಗ್ರಹಿಸಿದೆ. ಆದರೆ ಅವರಿಂದ ಸಕಾರಾತ್ಮಕವಾದ ಯಾವುದೇ ಪ್ರತಿಕ್ರಿಯೆ ಕಂಡುಬರಲಿಲ್ಲ. ದಾರಿ ಕಾಣದೆ ಕೊನೆಗೆ ನಮ್ಮ ಪಕ್ಷದ ಹಿರಿಯರಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದೇನೆ. ನನಗೆ ಬೇರೆ ಯಾವುದೇ ದಾರಿಯಿಲ್ಲ. ಇರೋದು ಇದೊಂದೇ ದಾರಿ ಎಂದರು.
ಆದರೆ ಈ ಕುರಿತು ತಾವು ಪಕ್ಷದ ಹಿರಿಯರಾದ ಸುಷ್ಮಾ ಸ್ವರಾಜ್ ಅವರ ಅನುಮತಿ ಕೇಳಿದ್ದೀರಾ ಎಂಬ ಪ್ರಶ್ನೆಗೆ ಏನೂ ಉತ್ತರಿಸದೆ ಕೇಳಿಸದಂತೆ ನಗುವಿನಲ್ಲೇ ಮಾತು ಹಾರಿಸಿದರು.
ಅಕ್ರಮ ಗಣಿಗಾರಿಕೆ ಹಗರಣದ ತನಿಖೆಯನ್ನು ಯಾವುದೇ ಕಾರಣಕ್ಕೆ ಸಿಬಿಐಗೆ ನೀಡುವ ಕೆಲಸ ಮಾಡೋದಿಲ್ಲ ಎಂದು ಒತ್ತಿ ಹೇಳಿದ ಅವರು ಸಿಬಿಐ ಕಾಂಗ್ರೆಸ್‌ನ ಕೈಗೊಂಬೆ ಎಂಬುದು ತಿಳಿದಿದೆ. ಹಾಗಾಗಿ ಯಾವ ಕಾರಣಕ್ಕೂ ಸಿಬಿಐಗೆ ತನಿಖೆಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅದಿರು ರಫ್ತಿಗೆ ನಿಷೇಧ ಹೇರುವುದರಿಂದ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ನಿರುದ್ಯೋಗಿಗಳಾಗುತ್ತಾರೆ ಎಂಬ ಸಚಿವ ಜನಾರ್ಧನ ರೆಡ್ಡಿ ಹೇಳಿಕೆಯನ್ನು ಪತ್ರಕರ್ತರು ಮುಖ್ಯಮಂತ್ರಿಗಳ ಗಮನ ಸೆಳೆದಾಗ ಅವರು, ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವುದರಿಂದ ಆಗುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಅದಿರು ಸಾಗಣೆಯ ಅಕ್ರಮದಲ್ಲಿ ಸಾಕಷ್ಟು ಅಧಿಕಾರಿಗಳು ಶಾಮೀಲಾಗಿರುವುದು ನನಗೆ ಗೊತ್ತು. ಶೀಘ್ರದಲ್ಲಿಯೇ ಇವೆಲ್ಲವುಗಳಿಗೆ ಉತ್ತರ ನೀಡಿ ಆಡಳಿತಕ್ಕೆ ಚುರುಕು ನೀಡುತ್ತೇನೆ, ಕಾದು ನೋಡಿ ಎಂದು ಯಡಿಯೂರಪ್ಪ ತಿಳಿಸಿದರು.