ಕಳೆದ ಐವತ್ತು ವರ್ಷಗಳಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಆಗದ ಅಭಿವೃದ್ಧಿ ಎರಡು ವರ್ಷಗಳಲ್ಲಿ ಆಗಿದೆ. ಬಳ್ಳಾರಿಯಲ್ಲಿನ ಅಭಿವೃದ್ಧಿ ಕಂಡು ಕಾಂಗ್ರೆಸ್ ನಾಯಕರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಬಳ್ಳಾರಿಯನ್ನು ಗೂಂಡಾ ರಾಜ್ ಮಾಡಿದ್ದು ಕಾಂಗ್ರೆಸ್, ಇದೀಗ ನಮ್ಮ ವಿರುದ್ಧ ಟೀಕಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಕೈಗೊಂಡಿರುವ ನಾಡ ರಕ್ಷಣಾ ನಡಿಗೆ ಪ್ರತಿಯಾಗಿ ಬಳ್ಳಾರಿಯಲ್ಲಿ ತಲೆ ಬೋಳಿಸಿಕೊಂಡು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಪಾದಯಾತ್ರೆ ಗುರುವಾರ ಆರಂಭಗೊಂಡಿದ್ದು, ಚೇಳ್ಳಗುರ್ಕಿಯಲ್ಲಿ ನಡೆದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ರೆಡ್ಡಿ ಈ ರೀತಿ ಆಕ್ರೋಶ ವ್ಯಕ್ತಪಡಿಸಿದರು.
ಐವತ್ತು ವರ್ಷದಿಂದ ಬಳ್ಳಾರಿ ಅಭಿವೃದ್ಧಿ ಮಾಡದ ಕಾಂಗ್ರೆಸ್ ಬಾಯಿಗೆ ಬಂದಂತೆ ಟೀಕಿಸುತ್ತಿವೆ. ರಾಜ್ಯದಲ್ಲಿ ನಾವು ಒಂದಿಂಚೂ ಗಣಿಗಾರಿಕೆ ನಡೆಸಿಲ್ಲ, ಒಂದು ವೇಳೆ ಅದನ್ನು ಸಾಬೀತುಪಡಿಸಿದರೆ ಇಲ್ಲೇ ನೇಣಿಗೆ ಶರಣಾಗುತ್ತೇನೆ ಎಂದು ಸವಾಲು ಹಾಕಿದರು. ಬಳ್ಳಾರಿಯಲ್ಲಿ ಗೆಲುವು ಸಾಧಿಸಿದ ನಂತರ ಬಳ್ಳಾರಿ ಜನತೆಗೆ ಕೈಕೊಟ್ಟು ಹೋಗ ಸೋನಿಯಾಗಾಂಧಿ, ಒಮ್ಮೆಯೂ ಇಲ್ಲಿಗೆ ಭೇಟಿ ನೀಡಿಲ್ಲ. ಆದರೆ ಸೋತರೂ ಕೂಡ ತಾಯಿ ಸುಷ್ಮಾ ಸ್ವರಾಜ್ ಕಳೆದ 11 ವರ್ಷದಿಂದ ನಿರಂತರವಾಗಿ ಭೇಟಿ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೊಲೆಗಡುಕು ದಿವಾಕರ ಬಾಬುವನ್ನು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ನಿಮಗೆ ನಾಚಿಕೆಯಾಗುದಿಲ್ಲವಾ. ನಿಮ್ಮ ಪಕ್ಷದ ನೈತಿಕತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಆ ಕಾರಣಕ್ಕಾಗಿಯೇ ಕೊಲೆಗಡುಕರ, ಭ್ರಷ್ಟರ ವಿರುದ್ಧ ಹೋರಾಡಲು ಶ್ರೀರಾಮುಲು ಇಂದು ತೊಡೆ ತಟ್ಟಿ ಅಖಾಡಕ್ಕೆ ಇಳಿದಿದ್ದಾರೆ ಎಂದು ಶ್ರೀರಾಮುಲು ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ಕಿಡಿಕಾರಿದ ರೆಡ್ಡಿ, ಬಳ್ಳಾರಿಯ ಅಭಿವೃದ್ದಿ ಸಹಿಸದ ನೀನು ಪಾದಯಾತ್ರೆಯುದ್ದಕ್ಕೂ ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡುತ್ತಿದ್ದೀಯ. 60ವರ್ಷದ ನೀನೇ ಸದನದಲ್ಲಿ ತೊಡೆ ತಟ್ಟುವುದಾದರೆ ಕೇವಲ 27 ವರ್ಷದ ಸುರೇಶ್ ಬಾಬು ತಾಳ್ಮೆ ಕಳೆದುಕೊಳ್ಳುವುದರಲ್ಲಿ ತಪ್ಪೇನಿದೆ. ಮುಖ್ಯಮಂತ್ರಿಯವರನ್ನು ಕೂಡ ತಾಳ್ಮೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಸೃಷ್ಟಿ ಮಾಡಿದ ಸಿದ್ದರಾಮಯ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯನ್ನು ಕಂಡು ಕಾಂಗ್ರೆಸ್, ಜೆಡಿಎಸ್‌ನವರು ಹೆದರಿಕೊಳ್ಳುತ್ತಿದ್ದಾರೆ. ಮೊದಲು ಬಳ್ಳಾರಿಯನ್ನು ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದರು. ಈಗ ಎಲ್ಲರೂ ಬಳ್ಳಾರಿ ಕಡೆಗೇ ಬರುತ್ತಿದ್ದಾರೆ. ಯಾರೇ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.