ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಬೇಡ: 'ಮುಖ್ಯಮಂತ್ರಿ' ಚಂದ್ರು
ವಿಜಾಪುರ, ಶುಕ್ರವಾರ, 30 ಜುಲೈ 2010( 13:51 IST )
ನಾವು ಪಾಶ್ಚಾತ್ಯ ಸಂಸ್ಕೃತಿಯ ಉತ್ತಮ ಗುಣಗಳನ್ನು ಮಾತ್ರ ಪಡೆಯಬೇಕೇ ಹೊರತು ಅದನ್ನೇ ಅನುಕರಿಸುವುದು ಸಲ್ಲ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮಹಿಳಾ ವಿವಿಯಲ್ಲಿ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಉದ್ಘಾಟಿಸಿದ ಅವರು, ನಮ್ಮ ದೇಶೀಯ ಸಂಸ್ಕೃತಿ ಅತ್ಯಂತ ಶ್ರೀಮಂತ. ಅದನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಎಲ್ಲರಿಗಿದೆ. ನಮ್ಮ ಸಾಂಸ್ಕ್ಕತಿಕ ಬದುಕು ಮತ್ತು ಬದುಕಿನ ಭಾಷೆ ವೈವಿಧ್ಯಗಳಿಂದ ಕೂಡಿದೆ. ಆ ವೈಭವ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳಿಗೆ ಬಂದಿರುವ ಕುತ್ತು ನಿವಾರಣೆ ಮಾಡಬೇಕಾದರೆ ಯುವ ಜನಾಂಗದಲ್ಲಿ ತಿಳಿವಳಿಕೆ ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ನಮ್ಮ ಜನಪದ ಭಾಷೆ ನಾನಾ ಬೆಡಗುಗಳಿಂದ ಕೂಡಿದೆ, ಆ ಭಾಷಾ ಸೊಗಡನ್ನು ನಿತ್ಯ ಜೀವನದಲ್ಲಿ ಬಳಸಿಕೊಂಡು ಬರಬೇಕಾಗಿದೆ. ಆಗ ಮಾತ್ರ ಅಂತಃಸತ್ವ ಇರುವ ಭಾಷೆ ನಶಿಸಿ ಹೋಗುವುದನ್ನು ನಾವು ತಪ್ಪಿಸಬಹುದಾಗಿದೆ ಎಂದು ಕರೆ ನೀಡಿದರು.
ಯುನೆಸ್ಕೊ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಜಗತ್ತಿನಲ್ಲಿ 6 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಇವುಗಳಲ್ಲಿ ಶೇ.50ರಷ್ಟು ಭಾರತದಲ್ಲೇ ಇವೆ. ಇದರಲ್ಲಿ ಅದೆಷ್ಟೊ ಭಾಷೆಗಳು ನಶಿಸಿ ಹೋಗುವ ಹಂತದಲ್ಲಿವೆ. ಕನ್ನಡ ಭಾಷೆ ಕೂಡ ಆ ಸಾಲಿಗೆ ಸೇರದಂತೆ ಎಚ್ಚರ ವಹಿಸಬೇಕಿದೆ ಎಂದರು.
ಕರ್ನಾಟಕದಲ್ಲೇ ಕನ್ನಡ ಅನಾಥವಾಗುವ ದುಃಸ್ಥಿತಿ ಬಂದೊದಗಿದ್ದು, ಇದಕ್ಕೆ ಯಾವೊಂದು ಪಕ್ಷ ಅಥವಾ ಸರ್ಕಾರ ಕಾರಣ ಎಂದು ಹೇಳಲಾಗದು. ಇಲ್ಲಿವರೆಗೆ ನಮ್ಮನ್ನು ಆಳಿರುವ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಉದಾಸೀನ ಪ್ರವೃತ್ತಿ ಮತ್ತು ನಿರಭಿಮಾನ ಕಾರಣ. ಈ ಪರಿಸ್ಥಿತಿ ತೊಡೆದು ಹಾಕಲು ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಮ್ಮಿಕೊಂಡ ಆಂದೋಲನದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಮನವಿ ಮಾಡಿದರು.