ಯಡಿಯೂರಪ್ಪ ಕ್ರಮ ದಾರಿ ತಪ್ಪಿಸುವ ತಂತ್ರ: ವಿ.ಎಸ್.ಉಗ್ರಪ್ಪ
ತುಮಕೂರು, ಶುಕ್ರವಾರ, 30 ಜುಲೈ 2010( 15:21 IST )
ಸಣ್ಣ ಬಂದರುಗಳಲ್ಲಿ ಅದಿರು ಸಾಗಾಟ ನಿಷೇಧಿಸಿರುವ ಮುಖ್ಯಮಂತ್ರಿಯ ಕ್ರಮ ಜನರನ್ನು ದಾರಿ ತಪ್ಪಿಸುವ ತಂತ್ರ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ತುಮಕೂರಿನಿಂದ ಕೋರಾಕ್ಕೆ ಆಗಮಿಸಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ತನಿಖೆಯನ್ನು ಸಿಬಿಐಗೆ ವಹಿಸಿ ಎಂದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಣ್ಣ ಬಂದರುಗಳಲ್ಲಿ ಅದಿರು ಸಾಗಾಟ ನಿಷೇಧಿಸಿ ಜನರ ದಿಕ್ಕು ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದರು.
ಸಚಿವ ಜನಾರ್ದನ ರೆಡ್ಡಿ ಕುಟುಂಬಕ್ಕೆ ಸೇರಿದ ಒಎಂಸಿ, ಎಎಂಸಿ, ಬಿಎಂಸಿ ಮೈನಿಂಗ್ ಕಂಪನಿಗಳು ಸುಮಾರು 27 ಸಾವಿರ ಮೆಟ್ರಿಕ್ ಟನ್ ರಾಜ್ಯದ ಅದಿರನ್ನು ಆಂಧ್ರ ಫರ್ಮಿಟ್ ಪಡೆದು ಅಕ್ರಮ ಸಾಗಾಟ ಮಾಡಿದ್ದು, ಈ ಸಂಬಂಧ ಅನಂತಪುರ ಹಾಗೂ ಬಳ್ಳಾರಿ ಜಿಲ್ಲೆಯ ಡಿಎಫ್ಒಗಳೇ ನೋಟಿಸ್ ನೀಡಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಯಾವುದೇ ಕ್ರಮ ಜರುಗಿಸದ ಮುಖ್ಯಮಂತ್ರಿ ಅವರ ವರ್ತನೆ ಅನುಮಾನ ಹುಟ್ಟಿಸುತ್ತದೆ ಎಂದರು.
ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ, ಕೆಲ ದಿನಗಳ ಹಿಂದೆಯೂ ಸಚಿವ ಜನಾರ್ದನರೆಡ್ಡಿ ತಮ್ಮ ಮೈನಿಂಗ್ ಕಂಪನಿಗಳ ಮೂಲಕ ಆಂಧ್ರ ಫರ್ಮಿಟ್ ಹೆಸರಲ್ಲಿ 25 ಸಾವಿರ ಮೆಟ್ರಿಕ್ ಟನ್ ಅಕ್ರಮ ಅದಿರು ಮಾರಾಟ ಮಾಡಿದ್ದಾರೆ. ಅನಂತಪುರ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಪರ್ಮಿಟ್ ಪಡೆದಿರುವ ಈ ಮುಖಂಡರು ಅಲ್ಲಿ ನಿಗದಿತ ಪ್ರಮಾಣದ ಅದಿರನ್ನೇ ತೆಗೆಯದೇ ರಾಜ್ಯದ ಅದಿರನ್ನು ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.