ಕಾಂಗ್ರೆಸ್ ಯಾತ್ರೆಗೆ ಕೇಶಮುಂಡನ ಉತ್ತರವಲ್ಲ: ನಾರಾಯಣಸ್ವಾಮಿ
ಕೋಲಾರ, ಶುಕ್ರವಾರ, 30 ಜುಲೈ 2010( 15:22 IST )
ಸರಕಾರದ ವೈಫಲ್ಯಗಳ ವಿರುದ್ಧ ಪ್ರತಿಪಕ್ಷಗಳ ಹೋರಾಟಕ್ಕೆ ಪ್ರತಿಕ್ರಿಯಿಸಲು ಬೇರೆ ದಾರಿ ಇತ್ತು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಆರೋಗ್ಯ ಸಚಿವರು ಅನಾರೋಗ್ಯಕರ ಹೇಳಿಕೆ ನೀಡಿರುವುದು ಹೊಣೆಗೇಡಿತನದ ಪರಮಾವಧಿ ಎಂದು ಜೆಡಿಎಸ್ ಹಿರಿಯ ಮುಖಂಡ ಸಿ. ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜನತೆ ದೇವರಿಗೆ ಒಂದೊಂದು ರೀತಿಯಲ್ಲಿ ಹರಕೆ ತೀರಿಸುತ್ತಾರೆ. ಆದರೆ ಪ್ರತಿಪಕ್ಷಗಳು ಬಳ್ಳಾರಿಗೆ ಪಾದಯಾತ್ರೆ ಮಾಡುವುದರಿಂದ ಬಿದ್ದಿರುವ ದೃಷ್ಠಿ ನಿವಾರಣೆಗೆ ತಲೆಬೋಳಿಸಿಕೊಂಡು ಮುಂದಿನ ವರಮಹಾಲಕ್ಷಿ ಹಬ್ಬದವರೆಗೆ ಕಪ್ಪುಬಟ್ಟೆ ಹಾಕಿಕೊಳ್ಳುವುದಾಗಿ ಶಪಥ ಮಾಡಿ ಅಸಹ್ಯಕರ ಹೇಳಿಕೆ ನೀಡಿರುವುದು ಖಂಡನೀಯ. ಹಾಗೂ ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದರು.
ಆಡಳಿತ ಪಕ್ಷಗಳ ವೈಫಲ್ಯಗಳ ವಿರುದ್ಧ ಚಳವಳಿ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯ ಹಕ್ಕು, ಪ್ರತಿಪಕ್ಷ ಕಾಂಗ್ರೆಸ್ ತಮ್ಮದೇ ಆದ ಜಾಥಾ, ನಡಿಗೆಯಲ್ಲಿ ಶಾಂತಿಯುತವಾಗಿ ಕಾನೂನು ಚೌಕಟ್ಟಿನಲ್ಲಿ ಹೋರಾಟ ನಡೆಸುತ್ತಿದ್ದರೆ ಕೆಟ್ಟದಾದ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಸರಕಾರಕ್ಕಾಗಲೀ ಅಥವಾ ಸಚಿವರಿಗಾಗಲೀ ಗೌರವ ತರುವ ವಿಚಾರವಲ್ಲ ಎಂದು ನುಡಿದರು.
ಸಂಘ ಪರಿವಾರದವರು ರಾಷ್ಟ್ರ ಪ್ರೇಮದ ಮಾತನಾಡುತ್ತಿದ್ದರಿಂದ ಅವರು ಪ್ರಾಮಾಣಿಕ ಆಡಳಿತ ನೀಡುತ್ತಾರೆ ಎಂಬ ಭ್ರಮೆ ನನಗೂ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸರಕಾರದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕಾನೂನು ಸಂಸದೀಯ ವ್ಯವಸ್ಥೆಗೆ ಗೌರವ ನೀಡದಿರುವುದನ್ನು ನೋಡಿದ ಮೇಲೆ ಅವರ ನಿಜ ಬಣ್ಣ ಬಯಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.