ಅಕ್ರಮ ಗಣಿಗಾರಿಕೆ ನಡೆಸಿ ರಾಜ್ಯದ ಸಂಪತ್ತು ಲೂಟಿ ಮಾಡಿರುವ ರೆಡ್ಡಿ ಬ್ರದರ್ಸ್ ಸಚಿವ ಶ್ರೀರಾಮುಲು ತಲೆ ಬೋಳಿಸುವ ಮೂಲಕ ಜಿಲ್ಲೆಯ ಬೆಟ್ಟ, ಗುಡ್ಡಗಳನ್ನು ಯಾವ ರೀತಿ ಬೋಳಿಸಿ ಹಾಕಿದ್ದಾರೆ ಎಂದು ಸಾಂಕೇತಿಕವಾಗಿ ದೇಶಕ್ಕೆ ಸಾರಿ ಹೇಳಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾರ ತಲೆ ಬೋಳಿಸ್ತಾರೋ ಅಂತ ಕಾದು ನೋಡಬೇಕು ಎಂದರು.
ಕಾಂಗ್ರೆಸ್ ಪಾದಯಾತ್ರೆಯಿಂದ ಆ ಪಕ್ಷದಲ್ಲಿನ ಗುಂಪುಗಾರಿಕೆ ಬಯಲು ಮಾಡಿದೆ. ಪಾದಯಾತ್ರೆ ಕುರಿತು ಕಾಂಗ್ರೆಸ್ ಗಂಭೀರವಾಗಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಲಾರಿಗಳಲ್ಲಿ ಬಾಡಿಗೆ ಜನರನ್ನು ತಂದು ಪಾದಯಾತ್ರೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿನ ಕಾಂಗ್ರೆಸ್ ನಾಯಕರು ಬಳಸುತ್ತಿರುವ ಪದಬಳಕೆ ಅಶಾಂತಿಗೆ ಕಾರಣ ಆಗಕೂಡದು ಎಂದರು.
ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನಾಯಕರು ಕೈಗೊಂಡಿರುವ ಪಾದಯಾತ್ರೆಯಿಂದ ಜೆಡಿಎಸ್ ದೃಢಗೆಟ್ಟಿಲ್ಲ ಎಂದು ಈ ಸಂದರ್ಭದಲ್ಲಿ ಹೇಳಿದರು.