ಬೆಂಗಳೂರು ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್)ನಲ್ಲಿ ನಡೆದ ಕಬ್ಬಿಣದ ಅದಿರು ರಫ್ತು ಉದ್ಯಮಕ್ಕೆ ಸಂಬಂಧಿಸಿದಂತೆ ನಡೆದ ಅವ್ಯವಹಾರ ಕುರಿತು ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಅಧ್ಯಕ್ಷ ಡಾ.ವಿಕ್ರಮ ಪಾಟೀಲ್ ತಿಳಿಸಿದ್ದಾರೆ.
ಅದಿರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಕಳೆದ ತಿಂಗಳು ಮಂಡಳಿ ಸಭೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಮಂಡಳಿ ಮತ್ತು ಸಂಸ್ಥೆ ಅಧ್ಯಕ್ಷರ ಗಮನಕ್ಕೆ ತಾರದೇ ಏನೆಲ್ಲಾ ನಡೆದಿದೆ. ಆಡಿಟ್ ವರದಿಯಲ್ಲಿ ಅದಿರು ಅವ್ಯವಹಾರ ಬಹಿರಂಗಗೊಂಡಿದೆ. ಆ ನಂತರ ಸಂಸ್ಥೆಯಲ್ಲಿ ಕೆಲ ಬದಲಾವಣೆಗಳೂ ಆಗಿವೆ ಎಂದು ತಿಳಿಸಿದರು.
ಕಬ್ಬಿಣದ ಅದಿರು ಖಾಸಗಿಯವರಿಂದ ಖರೀದಿಸಲು ನಿರ್ಧರಿಸಿದ ನಂತರ ಈ ಅವ್ಯವಹಾರ ನಡೆದಿದೆ. ಎಂಎಸ್ಐಎಲ್ ಕೂಡ ಅವ್ಯವಹಾರ ನಡೆದದ್ದು ನಿಜ ಎಂದು ಒಪ್ಪಿಕೊಂಡಿದೆ. ವಿಚಾರಣೆ ನಂತರ ಎಲ್ಲವೂ ಬಹಿರಂಗವಾಗಲಿದೆ ಎಂದಿದ್ದಾರೆ.