ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಡೊನೇಷನ್ ಹಾವಳಿ ನಿರ್ಮೂಲನೆಗೆ ರಾಜ್ಯ ಸರಕಾರ ಮುಂದಾದಲ್ಲಿ ಕೇಂದ್ರ ಸರಕಾರ ಎಲ್ಲ ರೀತಿಯ ನೆರವು ನೀಡಲು ಸಿದ್ದವಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಚಾಮರಾಜಪೇಟೆಯ ಬೆಂಗಳೂರು ಸಿಟಿ ಇನ್ಸ್‌ಟ್ಯೂಟ್ ಸಭಾಂಗಣದಲ್ಲಿ ಶನಿವಾರ ನಡೆದ ನ್ಯೂಕ್ಲಿಯರ್ ಮೆಡಿಶನ್ ತಜ್ಞೆ ಡಾ.ಸರೋಜ ಅವರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಡ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡಲು ಡೊನೇಷನ್ ಹಾವಳಿ ಹಾಗೂ ದುಬಾರಿ ಶುಲ್ಕವೇ ಕಾರಣವಾಗುತ್ತಿದ್ದು, ಇದರಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಗುಣಮಟ್ಟ ಹಾಗೂ ಸೇವಾ ಮನೋಭಾವ ಕುಂಠಿತಗೊಳ್ಳುತ್ತಿದ್ದು, ಡೊನೇಷನ್ ಹಾವಳಿಯನ್ನು ಕಿತ್ತೊಗೆಯಬೇಕಿದೆ ಎಂದು ಕರೆ ನೀಡಿದರು.
ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಡಿಮೆ ಶುಲ್ಕದಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲು ಸರಕಾರ ಮುಂದಾಗಬೇಕಿದ್ದು, ಡೊನೇಷನ್ ಹಾವಳಿ ತಪ್ಪಿಸಲು ಸರಕಾರ ಮುಂದಾದರೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ ಎಲ್ಲ ರೀತಿಯ ಸಹಕಾರ ನೀಡಲು ತಾವು ಸಿದ್ದರೆಂದು ತಿಳಿಸಿದರು.