ಬಿಜೆಪಿ ಜತೆ ಸೇರಿ ಮತ್ತೆ ಸಮ್ಮಿಶ್ರ ಸರಕಾರ ರಚಿಸುವ ಸಾಧ್ಯತೆಗಳ ಬಗ್ಗೆ ಹುಟ್ಟಿಕೊಂಡಿದ್ದ ಊಹಾಪೋಹಗಳಿಗೆ ತೆರೆ ಎಳೆದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ, ಮೈತ್ರಿ ಮಾಡಿಕೊಳ್ಳುವ ನೈತಿಕತೆಯನ್ನು ಕೇಸರಿ ಪಕ್ಷ ಉಳಿಸಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಿದ್ದ ಅವರು, ನಮ್ಮ ಪಕ್ಷದ ಜತೆ ಮಾತುಕತೆ ನಡೆಸುವ ಕನಿಷ್ಠ ನೈತಿಕತೆಯನ್ನಾದರೂ ಬಿಜೆಪಿ ಉಳಿಸಿಕೊಂಡಿದೆಯೇ ಎಂದು ಆಕ್ರೋಶಭರಿತರಾಗಿ ಪ್ರಶ್ನಿಸಿದರು.
ಬಿಜೆಪಿ ನಾಯಕರು ತಮ್ಮ ಪಕ್ಷದ ಆಂತರಿಕ ಕಚ್ಚಾಟಕ್ಕೆ ಜೆಡಿಎಸ್ ಪಕ್ಷವನ್ನು ಎಳೆದು ತರುತ್ತಿದ್ದಾರೆ. ಅದಕ್ಕಾಗಿ ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇನ್ನಾದರೂ ಈ ರೀತಿ ನಡೆದುಕೊಳ್ಳುವುದನ್ನು ಬಿಟ್ಟು ಕೊಂಚ ಪ್ರೌಢತೆಯನ್ನು ಮೈಗೂಡಿಸಿಕೊಳ್ಳಲಿ ಎಂದು ಇದೇ ಸಂದರ್ಭದಲ್ಲಿ ಅವರು ಸಲಹೆ ನೀಡಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಡುವೆ ಯಾವುದೇ ಕಾರಣಕ್ಕೂ ಮೈತ್ರಿ ಏರ್ಪಡುವ ಪ್ರಶ್ನೆಯೇ ಇಲ್ಲ. ಇದು ಕೇವಲ ವದಂತಿಯಷ್ಟೇ. ಮತ್ತೆ ಅಂತಹ ತಪ್ಪನ್ನು ನಾವು ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳುವ ಮೂಲಕ ಕಳೆದ ಕೆಲವು ದಿನಗಳಿಂದ ಹುಟ್ಟಿಕೊಂಡಿದ್ದ ಮರುಮೈತ್ರಿ ವದಂತಿಗೆ ತೆರೆ ಬಿದ್ದಿದೆ.
ತಿರುಗಿಬಿದ್ದ ಈಶ್ವರಪ್ಪ... ಜೆಡಿಎಸ್ ಜತೆ ಮೈತ್ರಿಗೆ ಸಿದ್ಧ ಎಂದು ಮೊನ್ನೆ ದಾವಣಗೆರೆಯಲ್ಲಿ ಹೇಳಿಕೆ ನೀಡಿದ್ದ ಈಶ್ವರಪ್ಪನವರ ಮಾತು ಶನಿವಾರ ಬದಲಾಗಿದೆ.
ಪ್ರಸಕ್ತ ಸ್ಥಿತಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಅಸಾಧ್ಯ. ಆದರೆ ಸರಕಾರವನ್ನು ಉಳಿಸಿಕೊಳ್ಳಬೇಕಾದರೆ ಯಾವುದೇ ರೀತಿಯ ತಂತ್ರಗಾರಿಕೆಗೆ ನಾವು ಸಿದ್ಧ. ರಾಜಕಾರಣವೆನ್ನುವುದು ನಿಂತ ನೀರಲ್ಲ ಎಂದು ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸರಕಾರ ಸ್ಥಿರವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಐದು ವರ್ಷಗಳ ಕಾಲ ಸುಗಮ ಆಡಳಿತ ನಡೆಸಲಿದ್ದಾರೆ. ಪ್ರಸಕ್ತ ಸರಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಹಾಗೆಂದಾದರೂ ಕಾಂಗ್ರೆಸ್ ಕುತಂತ್ರದಿಂದ ಸರಕಾರ ಉರುಳುವ ಸ್ಥಿತಿ ಬಂದಲ್ಲಿ ಆಗ ಮೇಲೆ ಹೇಳಿದ ತಂತ್ರಗಾರಿಕೆಯನ್ನು ಬಳಸುವ ಅವಕಾಶದ ಬಗ್ಗೆ ಯೋಚನೆ ಮಾಡುತ್ತೇವೆ ಎಂದರು.