ರಾಜ್ಯಪಾಲರು ಹದ್ದು ಮೀರಿ ವರ್ತಿಸುತ್ತಿದ್ದಾರೆ: ಚಂದ್ರೇಗೌಡ
ಬೆಂಗಳೂರು, ಭಾನುವಾರ, 1 ಆಗಸ್ಟ್ 2010( 10:24 IST )
ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಸಂವಿಧಾನದ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ, ಈ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ಒತ್ತಾಯಿಸಿದ್ದಾರೆ.
ರಾಜ್ಯಪಾಲರು ಸಂವಿಧಾನದ ಇತಿಮಿತಿಯೊಳಗೆ ತಮ್ಮ ಹಕ್ಕನ್ನು ಚಲಾಯಿಸಬೇಕೇ ಹೊರತು ಯಾವುದೇ ಒಂದು ಪಕ್ಷದ ಕಾರ್ಯಕರ್ತನಂತೆ ವರ್ತಿಸಬಾರದು. ಇವರಂತೆ ಬೇರೆ ಯಾವುದೇ ರಾಜ್ಯಪಾಲರು ನಡೆದುಕೊಂಡಿರುವುದನ್ನು ನಾನು ಇದುವರೆಗೂ ನೋಡಿಲ್ಲ. ಈ ಕುರಿತು ಚರ್ಚೆ ನಡೆಸುವಂತೆ ನಾನು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದೇನೆ ಎಂದು ಚಂದ್ರೇಗೌಡರು ತಿಳಿಸಿದ್ದಾರೆ.
ರಾಜ್ಯಪಾಲರ ಕುರಿತ ನನ್ನ ಕಳವಳಗಳಿಗೆ ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ ಸಹಮತ ವ್ಯಕ್ತಪಡಿಸಿದ್ದಾರೆ. ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುವಂತೆ ನಾನು ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ನವದೆಹಲಿಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ನಾಯಕ ವಿವರಣೆ ನೀಡಿದ್ದಾರೆ.
ಜತೆಗೆ ಇತ್ತೀಚೆಗಷ್ಟೇ ರಾಜ್ಯಪಾಲರು ಗೋಹತ್ಯೆ ನಿಷೇಧ ಸೇರಿದಂತೆ ಮಸೂದೆಗಳನ್ನು ವಾಪಸ್ ಮಾಡಿರುವ ಕ್ರಮವನ್ನು ಕೂಡ ಅವರು ಪ್ರಶ್ನಿಸಿದ್ದಾರೆ.
ಸಂವಿಧಾನಬದ್ಧವಾಗಿ ಇರಬೇಕಾದ ರಾಜ್ಯಪಾಲರು ಜನಪ್ರತಿನಿಧಿಗಳ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸಲು ಮುಂದಾದರೆ ಅದಕ್ಕೆ ಅರ್ಥವೇನು? ಶಾಸಕರಿಗೆ ಇರುವ ಹಕ್ಕುಗಳೇನು ಎಂಬುದನ್ನು ಈಗಾಗಲೇ ಹಲವು ಬಾರಿ ಸುಪ್ರೀಂ ಕೋರ್ಟ್ ತನ್ನ ತೀರ್ಪುಗಳಲ್ಲಿ ಹೇಳಿದೆ. ಇದೀಗ ರಾಜ್ಯಪಾಲರು ಮರಳಿಸಿರುವ ಮಸೂದೆಗಳನ್ನು ಸದನವು ಮತ್ತೊಮ್ಮೆ ಅಂಗೀಕರಿಸಿದರೆ ರಾಜ್ಯಪಾಲರು ಏನು ಮಾಡುತ್ತಾರೆ? ಇದೆಲ್ಲ ಅರ್ಥವಿಲ್ಲದ್ದು ಎಂದು ಚಂದ್ರೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ ರಾಜ್ಯಪಾಲರು ರಾಜಧಾನಿಗೆ ಧಾವಿಸಿ ವರಿಷ್ಠರಿಗೆ ರಾಜಕೀಯ ವಿದ್ಯಮಾನಗಳನ್ನು ವಿವರಿಸಿರುವುದು ಸರ್ವಥಾ ಸರಿಯಲ್ಲ. ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸುವ ಮೂಲಕ ಅವರು ಸಂವಿಧಾನದ ವಿಧಿ ವಿಧಾನಗಳನ್ನು ಉಲ್ಲಂಘಿಸಿದ್ದಾರೆ ಎಂದು ಮಾತಿನುದ್ದಕ್ಕೂ ಭಾರದ್ವಾಜ್ ವಿರುದ್ಧ ಅವರು ಕಿಡಿ ಕಾರಿದರು.