ವಿಶ್ವದಲ್ಲೇ ಭಾರತ ಮೂರನೆ ಅತಿ ದೊಡ್ಡ ಉಕ್ಕು ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಕೈಗಾರಿಕೆಗಳ ಸಾಧನೆಯಿಂದ ನಮ್ಮ ಕನಸು ನನಸಾಗುತ್ತಿದೆ ಎಂದು ಕೇಂದ್ರದ ಉಕ್ಕು ಖಾತೆ ಸಚಿವ ವೀರಭದ್ರ ಸಿಂಗ್ ಹೇಳಿದರು.
ಬಳ್ಳಾರಿ ಜಿಲ್ಲೆಯ ತೋರಣಗಲ್ ಜಿಂದಾಲ್ ವಿಜಯನಗರ ಸ್ಟೀಲ್ ಲಿ.ನಲ್ಲಿ 2,250 ಎಂಎಂ ವಿಸ್ತೀರ್ಣದ ಬಿಸಿ ಉಕ್ಕಿನ ಸುರುಳಿ ಉತ್ಪಾದನಾ ಘಟಕವನ್ನು ದೇಶಕ್ಕೆ ಸಮರ್ಪಿಸಿದರು. ಜತೆಗೆ ಜಿಂದಾಲ್ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಅವರಿಗೆ 2007-08ನೇ ಸಾಲಿನ ಉಕ್ಕು ಕ್ಷೇತ್ರದ 'ಪ್ರಧಾನಮಂತ್ರಿ ಪದಕ ಪ್ರಶಸ್ತಿ' ಪ್ರದಾನ ಮಾಡಿ ಮಾತನಾಡಿದರು.
ಅಮೆರಿಕ, ರಷ್ಯಗಳಂಥ ದೇಶಗಳನ್ನು ಹಿಮ್ಮೆಟ್ಟುವಲ್ಲಿ ಭಾರತ ಯಶಸ್ವಿಯಾಗಿದೆ. ಜಿಂದಾಲ್‌ನಂತಹ ಕಾರ್ಖಾನೆಗಳು ಉಕ್ಕು ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇಂತಹ ಪ್ರತಿಷ್ಠಿತ ಕಾರ್ಖಾನೆಗೆ ಗಣಿ ಗುತ್ತಿಗೆ ನೀಡಲು ರಾಜ್ಯ ಸರಕಾರ ಮುಂದಾಗಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಉಕ್ಕು ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಉತ್ತಮ ಗುಣಮಟ್ಟದ ಅದಿರು ಸಿಗುತ್ತಿದೆ. ಇದರಿಂದ ದೇಶದಲ್ಲಿ ಉಕ್ಕು ವಲಯ ಸ್ಥಾಪನೆಗೊಳ್ಳಲು ಸಹಕಾರಿಯಾಗಲಿದೆ ಎಂದರು.