ಆಡಳಿತ ಪಕ್ಷಕ್ಕೆ ಪಾದಯಾತ್ರೆ ಕೈಗೊಳ್ಳುವ ಅವಶ್ಯಕತೆಯಿಲ್ಲ ಎಂದು ಬಳ್ಳಾರಿ ಸಚಿವರು ಕೈಗೊಂಡಿರುವ 'ಸ್ವಾಭಿಮಾನಿ ಯಾತ್ರೆ' ಬಗ್ಗೆ ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅಸಹನೆ ವ್ಯಕ್ತಪಡಿಸಿದರು.
ಕೊಪ್ಪಳದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತ ನಡೆಸುವವರು ಅಭಿವೃದ್ದಿಯತ್ತ ಗಮನ ಹರಿಸಬೇಕೇ ಹೊರತು ಪಾದಯಾತ್ರೆಗಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಿಗೆ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದರು.
ಲೋಕಾಯುಕ್ತರಿಗೆ ಅಧಿಕಾರ ಸೇರಿದಂತೆ ಸಾಕಷ್ಟು ಅಭಿವೃದ್ದಿ ಕಾರ್ಯ ಕೈಗೊಂಡಿದ್ದರಿಂದ ಕಾಂಗ್ರೆಸ್ ಮುಖಂಡರಿಗೆ ಮಾತನಾಡಲು ಯಾವುದೇ ವಿಷಯ ಇಲ್ಲ. ಆದ್ದರಿಂದ ಪಾದಯಾತ್ರೆ ಕೈಗೊಂಡಿದ್ದಾರೆ. ಪಾದಯಾತ್ರೆ ಕೈಗೊಳ್ಳುವುದಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ ಮುಖ್ಯಮಂತ್ರಿ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಮುಖ್ಯಮಂತ್ರಿಗೆ ಮಾನಸ ಪುತ್ರನಾಗಿದ್ದು, ಬಿಜೆಪಿಗೆ ನಿಷ್ಠೆಯಾಗಿದ್ದೇನೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡದಂತಹ ಕೆಲಸ ಬಿಜೆಪಿ ಸರಕಾರ ಮಾಡಿದೆ. ರಾಜ್ಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನ ನಡೆಸಲು ಮುಂದಾದರೆ ಪ್ರತಿಪಕ್ಷದವರು ಅಧಿವೇಶನದ ಸಮಯವನ್ನೇ ವ್ಯರ್ಥ ಮಾಡುತ್ತಾರೆ ಎಂದು ದೂರಿದರು.