ಗಣಿ ಹಗರಣವನ್ನು ಸಿಬಿಐಗೆ ವಹಿಸುವ ಮಾತೇ ಇಲ್ಲ ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಈ ಹಿಂದೆ ಸಕ್ಕರೆ ಹಗರಣ ಸೇರಿ ಹಲವು ಸಂದರ್ಭದಲ್ಲಿ ಸಿಬಿಐಯನ್ನು ಕಾಂಗ್ರೆಸ್ ದುರ್ಬಳಕೆ ಮಾಡಿಕೊಂಡಿದೆ. ಈ ಕಾರಣಕ್ಕೆ ಗಣಿ ಹಗರಣ ಸಿಬಿಐಗೆ ವಹಿಸುವ ಮಾತೇ ಇಲ್ಲ ಎಂದರು.
ಕಾಂಗ್ರೆಸಿಗರು ನಂಬಿಕೆಗೆ ಅರ್ಹರಲ್ಲ ಎಂಬುದು ನಾನಾ ಸಂದರ್ಭಗಳಲ್ಲಿ ಸಾಬೀತಾಗಿದೆ. ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡುವಂತೆ ಕಾಂಗ್ರೆಸಿಗರೇ ಒತ್ತಡ ಹೇರಿದ್ದರು. ಆದರೀಗ ಲೋಕಾಯುಕ್ತರ ಬಗ್ಗೆ ಅನುಮಾನ ವ್ಯಕ್ತಪಡಿಸುವುದೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮುಖಂಡರು ಬಳ್ಳಾರಿ ಕುರಿತು ಅಪಮಾನಕರ ಹೇಳಿಕೆ ನೀಡಿರುವುದು ನೋವು ತಂದಿದೆ. ಶೇ.99 ಕಾಂಗ್ರೆಸ್ ಮುಖಂಡರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ. ಆದರೂ ನಮ್ಮತ್ತ ಬೆರಳು ತೋರುತ್ತಿದ್ದಾರೆ ಎಂದರು.
ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿದ್ದೇ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ತಂತ್ರಜ್ಞಾನ ಮುಂದುವರಿದಿದ್ದು, ರಾಜ್ಯದ ಯಾವುದೇ ಭಾಗದಿಂದ ಆಡಳಿತದತ್ತ ಗಮನ ಹರಿಸಬಹುದು ಎಂದು ಆರೋಗ್ಯ ಸಚಿವರನ್ನು ಸಮರ್ಥಿಸಿಕೊಂಡರು.