ಜವನಗೊಂಡನಹಳ್ಳಿ, ಭಾನುವಾರ, 1 ಆಗಸ್ಟ್ 2010( 13:10 IST )
ರೆಡ್ಡಿಗಳು ಐದಾರು ವರ್ಷದ ಹಿಂದೆ ರಾಜಕಾರಣಿಗಳಾಗಿರಲಿಲ್ಲ, ವ್ಯಾಪಾರಿಗಳಾಗಿದ್ದರು. ವ್ಯಾಪಾರಿಗಳು ರಾಜಕಾರಣಕ್ಕೆ ಬಂದರೆ ಪ್ರಜೆಗಳು ಭಿಕಾರಿಗಳಾಗುತ್ತಾರೆ. ರಾಜ್ಯದ ಸಂಪತ್ತು ಲೂಟಿಗೆ ರೆಡ್ಡಿಗಳು ಅಧಿಕಾರಕ್ಕೆ ಬಂದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಜವನಗೊಂಡನಹಳ್ಳಿಗೆ ಏಳನೇ ದಿನದ ಪಾದಯಾತ್ರೆ ಶನಿವಾರ ಸಂಜೆ ಆರಕ್ಕೆ ಆಗಮಿಸಿತು. ರಸ್ತೆ ಬದಿ ನಡೆದ ಸಭೆಯಲ್ಲಿ ಸಿದ್ದು ಮಾತನಾಡಿದರು.
2003-04ರಲ್ಲಿ ರೆಡ್ಡಿಗಳಿಗೆ ನಯಾಪೈಸೆ ಆದಾಯ ಇರಲಿಲ್ಲ. ತೆರಿಗೆ ಕಟ್ಟಲು ಸಹ ಆಗುತ್ತಿರಲಿಲ್ಲ. ಈ ಆರು ವರ್ಷದಲ್ಲಿ ಸಾವಿರಾರು ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ. ಇದು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿನ ಅದಿರನ್ನು ಆಂಧ್ರಕ್ಕೆ ಸೇರಿಸಿದ್ದಾರೆಂದು ಲೋಕಾಯುಕ್ತರು ವರದಿ ಕೊಟ್ಟಿದ್ದಾರೆ. ಅದೇ ರೀತಿ ಅನಂತಪುರ ಜಿಲ್ಲಾ ಅರಣ್ಯಾಧಿಕಾರಿ ರೆಡ್ಡಿಗಳು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ರೆಡ್ಡಿಗಳು ಹಣದಾಸೆಗೆ ತಾಯ್ನಾಡನ್ನು ಆಂಧ್ರಕ್ಕೆ ಸೇರಿಸಿ ದ್ರೋಹ ಎಸಗಿದ್ದಾರೆ ಎಂದು ಹರಿಹಾಯ್ದರು.
ರೆಡ್ಡಿಗಳಿಗೆ ಹೆದರಿ ಯಡಿಯೂರಪ್ಪ ಶೋಭಾ ಕರಂದ್ಲಾಜೆ ಅವರನ್ನು ಕ್ಯಾಬಿನೆಟ್‌ನಿಂದ ಕೈ ಬಿಟ್ಟರು. ಅದೇ ಸಿಎಂ ಈಗ ರೆಡ್ಡಿಗಳು ಶೇ.101ರಷ್ಟು ಅಪ್ಪಟ ಚಿನ್ನ, ಪ್ರಾಮಾಣಿಕರು ಎನ್ನುತ್ತಿದ್ದಾರೆ. ಇವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.